
(ಸಾಂಕೇತಿಕ ಚಿತ್ರ)
ಬಳ್ಳಾರಿ: ಕಳೆದ 2 ವಾರಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ತಾಪದ ಪರಿಣಾಮ ಹಲವು ಪೋಷಕರು ತಮ್ಮ ನವಜಾತ ಶಿಶುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಉಷ್ಣಾಂಶ ಹೆಚ್ಚಾಗಿರುವ ಪರಿಣಾಮ ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆ ಉಲ್ಬಣಿಸಿದ್ದು, ಜಿಲ್ಲೆಯಲ್ಲಿ ಈ ಬೇಸಿಗೆಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಶಿಯಸ್ ಗೆ ತಲುಪಿದ್ದು ಹಲವು ಮಕ್ಕಳನ್ನು ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರದಂದು ಸುರಿದ ಸಣ್ಣ ಪ್ರಮಾಣದಲ್ಲಿನ ಮಳೆ ಬಿಸಿಲಿನ ತಾಪವನ್ನು ಕಡಿಮೆ ಮಾಡಿದೆ. ಬೇಸಿಗೆಯಲ್ಲಿ ಬರುವ ಮಳೆಯ ಪರಿಣಾಮ ತಾಪಮಾನ ಕಡಿಮೆಯಾದಂತೆನಿಸಿದರೂ ಒಂದೆರಡು ದಿನಗಳಲ್ಲೇ ಮತ್ತೆ ಏರಿಕೆಯಾಗಲಿದೆ.
ಜಿಲ್ಲಾಸ್ಪತ್ರೆಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ನಿರ್ಜಲೀಕರಣದ ಲಕ್ಷಣಗಳೊಂದಿಗೆ ದಿನನಿತ್ಯ ಕನಿಷ್ಠ 10 ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಗುತ್ತಿದೆ. ತಾಪಮಾನ ಹೆಚ್ಚಾಗಿರುವಾಗ ಮಕ್ಕಳಿಗೆ ಆರೈಕೆ ಮಾಡುವ ವಿಧಾನಗಳ ಬಗ್ಗೆ ಆಸ್ಪತ್ರೆಯ ವೈದ್ಯರು ಪೋಷಕರಿಗೆ ತಿಳಿಸುತ್ತಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿಯೇ ಪ್ರತ್ಯೇಕ ವಿಭಾಗವಿದೆ.