ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ವಾಜಪೇಯಿ ಉದ್ಯಾನವನ ನಿರ್ಮಾಣ: ಸಚಿವ ಮುನಿರತ್ನ
ಉದ್ಯಾನ ನಗರಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಾರ್ಕ್ ಅನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
Published: 13th May 2022 03:56 PM | Last Updated: 13th May 2022 03:56 PM | A+A A-

ಮುನಿರತ್ನ
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಾರ್ಕ್ ಅನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಉದ್ಯಾನವನಕ್ಕೆ ಆಗಸ್ಟ್ 15ರೊಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ಶುಕ್ರವಾರ ಹೇಳಿದ್ದಾರೆ.
ಇದನ್ನು ಓದಿ: ಬೆಂಗಳೂರು: ತಿಂಗಳೊಳಗೆ ವಾಜಪೇಯಿ ಕ್ರೀಡಾಂಗಣ ದುರಸ್ತಿ- ಬಿಬಿಎಂಪಿ ಮುಖ್ಯ ಆಯುಕ್ತ
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ಗಳಿಗಿಂತ ದೊಡ್ಡ ಪಾರ್ಕ್ ನಿರ್ಮಾಣ ಸಂಬಂಧ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಬೆಂಗಳೂರಿಗೆ ಶುದ್ಧ ಗಾಳಿಯ ಅಗತ್ಯವಿದ್ದು, ಈ ದೊಡ್ಡ ಪಾರ್ಕ್ ಗೆ ಸ್ಥಳ ಗುರುತಿಸುವಿಕೆ ಬಗ್ಗೆ ಇವತ್ತು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ಬನ್ನೇರುಘಟ್ಟ ಬಳಿ ಹಾಗೂ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸ್ಥಳ ಗುರುತಿಸಲಾಗುತ್ತಿದೆ. ಇದು ಅರಣ್ಯ ಇಲಾಖೆಯ ಜಾಗವಾಗಿದ್ದು, ಪಾರ್ಕ್ ನಿರ್ಮಾಣಕ್ಕೆ 400 ಎಕರೆ ಜಾಗದ ಅವಶ್ಯಕತೆ ಇದೆ. ಆಗಸ್ಟ್ 15 ರೊಳಗೆ ಈ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಮುಂದಿನ ಶುಕ್ರವಾರ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಕ್ಷೆ ತಯಾರಿಸಿ ತರ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪಾರ್ಕ್ ನಿರ್ಮಾಣ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಆ ಪಾರ್ಕ್ ಗೆ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಅಂತ ಹೆಸರಿಡಲು ನಿರ್ಧಾರ ಕೈಗೊಳ್ಳಲಾಗಿದೆ. ಜಾಗ ನಮ್ಮ ವಶಕ್ಕೆ ಬಂದ ನಂತರ ವೆಚ್ಚದ ಅಂದಾಜು ಗೊತ್ತಾಗುತ್ತೆ. 350 ಎಕರೆಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಪ್ರಾಥಮಿಕ ವೆಚ್ಚಗಳಿಗೆ ಹತ್ತು ಕೋಟಿ ರೂಪಾಯಿ ಇದೆ. ಪಿಪಿಆರ್ ನಂತರ ವೆಚ್ಚದ ನಿರ್ಧಾರ ಆಗುತ್ತದೆ. ಈ ಪಾರ್ಕ್ ನಿರ್ಮಾಣಕ್ಕೆ ಅನುದಾನದ ಕೊರತೆ ಆಗಲ್ಲ ಎಂದು ಸಚಿವರು ತಿಳಿಸಿದರು.