ಒಬಿಸಿ ಮೀಸಲಾತಿ ನಿಗದಿ ಮಾಡದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದಿಲ್ಲ: ರಾಜ್ಯ ಸರ್ಕಾರ
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳಿಗೆ(ಒಬಿಸಿ) ಮೀಸಲಾತಿ ಇಲ್ಲದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಿಲ್ಲ' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಣೆ ನೀಡಿದ್ದಾರೆ.
Published: 13th May 2022 09:06 AM | Last Updated: 13th May 2022 09:06 AM | A+A A-

ಬಸವರಾಜ ಬೊಮ್ಮಾಯಿ
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳಿಗೆ(ಒಬಿಸಿ) ಮೀಸಲಾತಿ ಇಲ್ಲದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಿಲ್ಲ' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಣೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರವು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸದೆ ಎದುರಿಸುವ ಪ್ರಶ್ನೆಯೇ ಇಲ್ಲ ಎಂಬ ನಿಲವಿಗೆ ಬಂದಿದ್ದು, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಕಾನೂನು ತಜ್ಞರ ಜತೆ ಸಭೆ ನಡೆಸಿದರು. ಸಭೆಯ ಮಾಹಿತಿಯನ್ನು ಸಚಿವ ಸಂಪುಟ ಸಭೆಯ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ನೀಡಿದರು.
ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ಕುರಿತು ಚರ್ಚೆ ನಡೆಸಿಲ್ಲ. ಆದರೆ, ಮುಖ್ಯಮಂತ್ರಿಗಳ ಜತೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗಿದೆ. ಹಿಂದುಳಿದ ವರ್ಗಕ್ಕೆ ಈ ಹಿಂದಿನ ಮೀಸಲಾತಿ ಅನ್ವಯವಾದರೂ ಸರಿ ಅಥವಾ ಹೊಸದಾಗಿ ಸರ್ಕಾರ ರೂಪಿಸುತ್ತಿರುವ ಮೀಸಲಾತಿ ಅನ್ವಯವಾದರೂ ಸರಿ, ಮೀಸಲಾತಿ ಕಲ್ಪಿಸಿಯೇ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡುತ್ತೇವೆ ಎಂದರು.
ಮೀಸಲಾತಿ ನಿಗದಿ ಮಾಡುವ ಸಂಬಂಧ ನ್ಯಾ.ಭಕ್ತವತ್ಸಲಂ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. 3-4 ತಿಂಗಳಲ್ಲಿ ವರದಿ ನೀಡಲಿದೆ. ಸುಪ್ರೀಂ ಆದೇಶ ಹಿನ್ನೆಲೆಯಲ್ಲಿ ವರದಿಯನ್ನು ಆದಷ್ಟುಬೇಗ ನೀಡುವಂತೆ ತಿಳಿಸಲಾಗಿದೆ. ಸಮಿತಿಯು ವರದಿ ನೀಡಲು ಸಮಯ ತೆಗೆದುಕೊಳ್ಳುವುದರಿಂದ ಮೂರು ತಿಂಗಳಾದರೂ ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಲು ತೀರ್ಮಾನಿಸಲಾಗಿದೆ. 1983ರಿಂದ ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸಲಾಗುತ್ತಿದೆ. ಮೀಸಲಾತಿ ಇಲ್ಲದೆ ಚುನಾವಣೆ ಎದುರಿಸಲು ಸಾಧ್ಯವಿಲ್ಲ.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ಪಕ್ಷಗಳು ಮತ್ತು ಒಬಿಸಿ ಸಂಘಟನೆಗಳು ಸಲ್ಲಿಸಿರುವ ಎರಡು ಅಥವಾ ಮೂರು ಅರ್ಜಿಗಳು ಮೇ 17 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಸರ್ಕಾರವು ತನ್ನ ಮುಂದಿನ ಕ್ರಮ ಕೈಗೊಳ್ಳುವ ಆದೇಶಕ್ಕಾಗಿ ಕಾತರದಿಂದ ಕಾಯುತ್ತಿದೆ ಎಂದರು. ಮಧ್ಯಪ್ರದೇಶ, ಮಹಾರಾಷ್ಟ್ರ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ, ರಾಜ್ಯದ ವಿಚಾರಕ್ಕೆ ಬಂದರೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದಿದ್ದಾರೆ.
ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವೇಳೆ ಇದು ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದೆ ಎಂದು ಸುಪ್ರೀಂ ಕೊರ್ಟ್ ಹೇಳಿತ್ತು. ಇದೇ ಕಾರಣಕ್ಕೆ ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆ ಸಿಎಂ ಬೊಮ್ಮಾಯಿ ಸುಪ್ರೀಂ ಕೋರ್ಟ್ ತೀರ್ಪು ಸಂಬಂಧಿಸಿದಂತೆ ಎಜಿ ಅವರ ಸಲಹೆ ಪಡೆದಿದ್ದಾರೆ. ಒಬಿಸಿ ಮೀಸಲಾತಿ ಇಟ್ಟುಕೊಂಡೇ ಚುನಾವಣೆ ಮಾಡಬೇಕು. ಸುಪ್ರೀಂ ಕೋರ್ಟ್‌ನ ಎರಡು ತೀರ್ಪಿನ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ ಎಂದರು.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಂಬಂಧ ಈಗಾಗಲೇ ಸಮಿತಿ ಕೂಡ ನೇಮಿಸಿದ್ದೇವೆ. ಅದರ ಬಗ್ಗೆಯೂ ಹಾಗೂ ವಿಪಕ್ಷ ನಾಯಕರ ಪತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ಮುಂದೆ ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
ಇದುವರೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಂವಿಧಾನದ ಪ್ರಕಾರವೇ ಓಬಿಸಿಯವರಿಗೆ ಪ್ರಾತಿನಿಧ್ಯ ಕೊಡುತ್ತಾ ಬಂದಿದ್ದೇವೆ. ಈಗ ಒಬಿಸಿ ಇಟ್ಟುಕೊಂಡೇ ಚುನಾವಣೆ ಮಾಡಬೇಕೆಂಬುದು ನಮ್ಮ ಉದ್ದೇಶ ಆಗಿದೆ. ಹೀಗಾಗಿ ಒಬಿಸಿ ಇಟ್ಟುಕೊಂಡು ಯಾವ ರೀತಿ ಚುನಾವಣಾ ಪ್ರಕ್ರಿಯೆ ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಸಿಎಂ ಹೇಳಿದ್ದಾರೆ.