
ಸಿ.ಟಿ.ರವಿ
ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಮೀಸಲಾತಿ ತಪ್ಪಲು ಕಾಂಗ್ರೆಸ್ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಕಾಂಗ್ರೆಸ್ ಬೆಂಬಲಿತ ಸರ್ಕಾರ ಸರಿಯಾಗಿ ಸಮರ್ಥನೆ ಮಾಡಿ ಹಿಂದುಳಿದ ವರ್ಗದ ಹಿತಾಸಕ್ತಿ ಎತ್ತಿಹಿಡಿಯದ ಕಾರಣ ಹೀಗಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತ್ಯವನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವಂತಿದೆ ಎಂದರು.
ಮಹಾರಾಷ್ಟ್ರದ ನಿಮ್ಮದೇ ಸರ್ಕಾರ ಮಾಡಿದ ತಪ್ಪಿನಿಂದ ಹೀಗಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ನೆನಪು ಮಾಡುವುದಾಗಿ ಹೇಳಿದ ಸಿ.ಟಿ. ರವಿ, ನ್ಯಾಯಾಧೀಶರ ಪೀಠ ತಡೆಯಾಜ್ಞೆ ನೀಡಿದ್ದರಿಂದ ಬಿಬಿಎಂಪಿ ಚುನಾವಣೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯಸಭೆಗೆ ಸ್ಪರ್ಧಿಸುವವರ ವಿವರವನ್ನು ಪಕ್ಷದ ಸಂಸದೀಯ ಮಂಡಳಿ ಅಂತಿಮಗೊಳಿಸಲಿದೆ ಎಂದು ಸಿ.ಟಿ. ರವಿ ತಿಳಿಸಿದರು.