ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ: ಆರೋಪಿ ನಾಗೇಶ್ ಬಂಧನಕ್ಕೆ ನಿಟ್ಟುಸಿರು ಬಿಟ್ಟ ಸಂತ್ರಸ್ತೆ ಕುಟುಂಬಸ್ಥರು
ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್ ಬಂಧನ ಬಳಿಕ ಸಂತ್ರಸ್ತ ಯುವತಿಯ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ ಎಂದು ಹೇಳಿದ್ದಾರೆ.
Published: 14th May 2022 12:29 PM | Last Updated: 14th May 2022 12:29 PM | A+A A-

ಆರೋಪಿ ನಾಗೇಶ್
ಬೆಂಗಳೂರು: ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್ ಬಂಧನ ಬಳಿಕ ಸಂತ್ರಸ್ತ ಯುವತಿಯ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ ಎಂದು ಹೇಳಿದ್ದಾರೆ.
ಯುವತಿಯ ಚಿಕ್ಕಪ್ಪ ಸುಂದರೇಶ್ ಅವರು ಮಾತನಾಡಿ, ಆತನ ಬಂಧನವಷ್ಟೇ ಅಲ್ಲ, ಆತನಿಗೆ ಶಿಕ್ಷೆಯಾದರೆ ನಮಗೆ ತೃಪ್ತಿಯಾಗುತ್ತದೆ ಎಂದು ಹೇಳಿದ್ದಾರೆ.
ಆರೋಪಿ ಮತ್ತೆಲ್ಲಿ ದಾಳಿ ನಡೆಸುತ್ತಾನೆಂದು ಯುವತಿ ಭಯಭೀತಳಾಗಿದ್ದಳು. ಕಳೆದ ವಾರವೇ ನಾಗೇಶ್ ಬಂಧನವಾಗಿದೆ ಎಂದು ಹೇಳಿದ್ದೆವು. ಪ್ರಸ್ತುತ ಬೆಳವಣಿಗೆಯನ್ನು ಆಕೆ ನಾವು ಹೇಳಿಲ್ಲ ಎಂದು ತಿಳಿಸಿದ್ದಾರೆ.
ಆರೋಪಿ ಬಂಧನ ಕುರಿತು ವಿಶ್ವಾಸವನ್ನೇ ಕಳೆದುಕೊಂಡಿದ್ದೆವು. ಎರಡು ದಿನಗಳ ಹಿಂದಷ್ಟೇ ಪೊಲೀಸ್ ಠಾಣೆಗೆ ಹೋಗಿ ಪ್ರಶ್ನೆ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದೆ. ಮುಂದಿನ ಮಂಗಳವಾರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನೂ ಭೇಟಿ ಮಾಡಲು ಚಿಂತನೆ ನಡೆಸಿದ್ದೆವು. ಮಹಿಳಾ ಆಯೋಗದ ಮುಖ್ಯಸ್ಥೆ ಪ್ರಮೀಳಾ ನಾಯ್ಡು ಅವರೊಂದಿಗೂ ಸಂಪರ್ಕದಲ್ಲಿದ್ದೆವು. ಕುಟುಂಬದ ದೇವರನ್ನೂ ಪ್ರಾರ್ಥಿಸಿದ್ದೆವು. ಆರೋಪಿ ಬಂಧನದ ಬಳಿಕ ಕುಟುಂಬಸ್ಥರಿಗೆ ನಿರಾಳ ಎದುರಾಗಿದೆ ಎಂದಿದ್ದಾರೆ.
ಪೊಲೀಸರು ಆರೋಪಿಯ ಕುಟುಂಬ ಸದಸ್ಯರನ್ನೂ ಬಂಧನಕ್ಕೊಳಪಡಿಸಬೇಕು. ಅಲ್ಲದೆ, ಆರೋಪಿಗೆ ಆ್ಯಸಿಡ್ ನೀಡಿದ ವ್ಯಕ್ತಿಯನ್ನು ಬಂಧಿಸಬೇಕು. ಅವರೆಲ್ಲರಿಗೂ ಶಿಕ್ಷೆಯಾದರೆ ನಮಗೆ ಶಾಂತಿ ಸಿಗುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ಸಂತ್ರಸ್ತ ಯುವತಿ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಐಸಿಯುವಿನಿಂದ ವಿಶೇಷ ವಾರ್ಡ್'ಗೆ ಸ್ಥಳಾಂತರಗೊಂಡಿದ್ದಾರೆ. ಗಂಜಿ, ಹಾಲು ಮತ್ತು ಮೊಟ್ಟೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಬಂಧಿಸಿದ್ದಕ್ಕಾಗಿ ಡಿಸಿಪಿ ಸಂಜೀವ್ ಪಾಟೀಲ್ ಅವರ ತಂಡವನ್ನು ನಾನು ಅಭಿನಂದಿಸುತ್ತೇನೆಂದು ಪ್ರಮೀಳಾ ಅವರು ಹೇಳಿದ್ದಾರೆ.