ಮತಾಂತರ ನಿಷೇಧ ಕಾಯ್ದೆ ಸಮಾಜದಲ್ಲಿ ಇನ್ನಷ್ಟು ಒಡಕು ಸೃಷ್ಟಿಸಲಿದೆ: ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ
ಮತಾಂತರ ನಿಷೇಧ ಕಾಯ್ದೆ ಸಮಾಜದಲ್ಲಿ ಇನ್ನಷ್ಟು ಒಡಕು ಸೃಷ್ಟಿಸಲಿದ್ದು, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಸಿಟಿ ಮಾರ್ಕೆಟ್ ಜಾಮಾ ಮಸೀದಿಯ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಅವರು ಹೇಳಿದ್ದಾರೆ.
Published: 15th May 2022 09:50 AM | Last Updated: 15th May 2022 01:39 PM | A+A A-

ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ
ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಸಮಾಜದಲ್ಲಿ ಇನ್ನಷ್ಟು ಒಡಕು ಸೃಷ್ಟಿಸಲಿದ್ದು, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಸಿಟಿ ಮಾರ್ಕೆಟ್ ಜಾಮಾ ಮಸೀದಿಯ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿಅವರು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಕ್ಸೂದ್ ಅವರು ಮಾತನಾಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮಾರ್ಗ ಹಿಡಿದಿದೆ. ಇದು ಅಗತ್ಯವಿದೆಯೇ?
"ಧರ್ಮದಲ್ಲಿ ಬಲವಂತವಿಲ್ಲ" ಎಂದು ಕುರಾನ್ ಸ್ಪಷ್ಟವಾಗಿ ಹೇಳುತ್ತದೆ. ಯಾವ ಮುಸಲ್ಮಾನನೂ ಮತ್ತೊಬ್ಬ ವ್ಯಕ್ತಿಯನ್ನು ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಅದನ್ನು ನಾವು ನಂಬುತ್ತೇವೆ. ನಿಜವಾದ ಕ್ರಿಶ್ಚಿಯನ್ ಅಥವಾ ಹಿಂದೂ ಕೂಡ ಹೀಗೆ ಮಾಡುವುದಿಲ್ಲ. ಸಮಾಜದಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ ಮತ್ತು ಕರ್ನಾಟಕದಲ್ಲಿ ಅಂತಹ ಮಸೂದೆಯನ್ನು ಅಂಗೀಕರಿಸುವ ಅಗತ್ಯವಿಲ್ಲ. ಸರ್ಕಾರದ ಬಳಿ ಅಂತಹ ಯಾವುದೇ ಮಾಹಿತಿಗಳಿದ್ದರೆ, ಅವರು ಅದನ್ನು ಸಾರ್ವಜನಿಕಗೊಳಿಸಬೇಕು. ಈ ಮಸೂದೆಯು ವ್ಯಕ್ತಿ ಮತಾಂತರಗೊಳ್ಳುವುದಕ್ಕೂ ಮುನ್ನ ಹಾಗೂ ನಂತರ ಸರ್ಕಾರಕ್ಕೆ ಮಾಹಿತಿ ನೀಡಬೇಕಿದೆ. ಈ ರೀತಿಯ ಕಾಯ್ದೆಯು ಸಮಾಜದಲ್ಲಿ ದ್ವೇಷ ಹೆಚ್ಚಿಸುತ್ತದೆ. ಒಡಕು ಮೂಡಿಸುತ್ತದೆ. ಇದು ಮತಾಂತರಗೊಳ್ಳಲು ಮನಸ್ಸು ಮಾಡಿದ ವ್ಯಕ್ತಿಗೆ ಅಪಾಯವನ್ನು ತಂದೊಡ್ಡಲಿದೆ. ನಂಬಿಕೆಯು ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಕಾಯ್ದೆಯು ವ್ಯಕ್ತಿಯ ಖಾಸಗಿತನದ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ.
ಇದನ್ನೂ ಓದಿ: ಮತಾಂತರ ತಡೆ ಕಾನೂನು ಜಾರಿಗೆ ಮುಂದಿನ ಅಧಿವೇಶನದವರೆಗೆ ಕಾಯಲು ಸಾಧ್ಯವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಮಸೂದೆಯನ್ನು ಜಾರಿಗೊಳಿಸಿದರೆ ರಾಜ್ಯ ಮತ್ತು ದೇಶದ ಜಾತ್ಯತೀತ ಸಾಮಾಜಿಕ ರಚನೆಯನ್ನು ನಾಶಪಡಿಸುತ್ತದೆ ಎಂದು ನೀವು ಭಾವಿಸುತ್ತೀರಾ?
ಈ ಸುಗ್ರೀವಾಜ್ಞೆಯು ಸಮಾಜದಲ್ಲಿ ಇನ್ನಷ್ಟು ಒಡಕುಗಳನ್ನು ಸೃಷ್ಟಿಸುತ್ತದೆ. ವ್ಯಕ್ತಿಯ ಮತಾಂತರದ ಬಗ್ಗೆ ಪೋಷಕರು, ಒಡಹುಟ್ಟಿದವರು ಮತ್ತು ಯಾವುದೇ ಸ್ನೇಹಿತರು ದೂರು ನೀಡಬಹುದು ಎಂದು ಮಸೂದೆ ಹೇಳುತ್ತದೆ. ಇದು ಕುಟುಂಬ ಮತ್ತು ಸಮಾಜದಲ್ಲಿ ಅನಗತ್ಯ ಸಾಮಾಜಿಕ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ.
ಕೆಲ ಸಮಾಜಘಾತುಕ ಶಕ್ತಿಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪಿತೂರಿಗಳನ್ನು ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಸರಕಾರ ಮಾಡುತ್ತಿರುವುದು ಸಮರ್ಪಕವಾಗಿದೆಯೇ?
ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿ ಡಿವೈಎಸ್ಪಿ ನೇತೃತ್ವದ ಸಮಿತಿಗಳನ್ನು ರಚಿಸಬೇಕು ಮತ್ತು ದ್ವೇಷಪೂರಿತ ಭಾಷಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸಿರುವ ತಹಸೀನ್ ಪೂನಾವಾಲಾ ತೀರ್ಪನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿರಬೇಕಿದೆ. ಒಬ್ಬ ವ್ಯಕ್ತಿಯ ಜೀವ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಆದರೆ, ಇಂದು, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗುತ್ತಿರುವಂತೆ ತೋರುತ್ತಿದೆ, ಆದರೆ ಅದು ರಾಜ್ಯದ ಹಿತದೃಷ್ಟಿಯಿಂದ ಪರಿಸ್ಥಿತಿಯನ್ನು ನಿಯಂತ್ರಿಸವ ವಿಶ್ವಾಸವಿದೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ
ಕೋಮು ಸೌಹಾರ್ದತೆಯನ್ನು ಖಾತ್ರಿಪಡಿಸುವಲ್ಲಿ ಸಮುದಾಯದ ಮುಖ್ಯಸ್ಥರು ಹೇಗೆ ಪಾತ್ರ ವಹಿಸಬಹುದು?
ಏಕತೆಯೊಂದೇ ಮುಂದಿರುವ ದಾರಿ ಮತ್ತು ಏಕತೆಗಾಗಿ ಶ್ರಮಿಸುವುದೇ ನಿಜವಾದ ದೇಶಭಕ್ತಿ. ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮುಸ್ಲಿಂ ಧಾರ್ಮಿಕ ಮುಖಂಡರು ಧ್ವನಿ ಎತ್ತಿದ್ದಾರೆ. ರಾಜ್ಯವು ಭಾರತದ ಅತ್ಯುತ್ತಮ ರಾಜ್ಯಗಳಲ್ಲಿ ಒಂದಾಗಿ ಅಭಿವೃದ್ಧಿ ಹೊಂದಬೇಕೆಂದು ನಾವು ಬಯಸುತ್ತೇವೆ. ನಾವು ಈಗಾಗಲೇ ರಾಜ್ಯದ ವಿವಿಧ ಧಾರ್ಮಿಕ ಮುಖ್ಯಸ್ಥರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಭವಿಷ್ಯದಲ್ಲಿ, ವಿವಿಧ ಧರ್ಮಗಳ ನಡುವೆ ಸಹೋದರತ್ವವನ್ನು ಉತ್ತೇಜಿಸಲು ಸಹಾಯ ಮಾಡುವ ಯಾವುದೇ ಪ್ರಯತ್ನಗಳಿಗೆ ನಾವು ಮುಕ್ತರಾಗಿದ್ದೇವೆ ಎಂದು ಹೇಳಿದ್ದಾರೆ.