
ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಸೋಮವಾರದಿಂದ ಆರಂಭಗೊಂಡಿದ್ದು, ಶಾಲೆಗೆ ಆಗಮಿಸಿರುವ ಮಕ್ಕಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದಿನಗಳ ನಂತರ ಶಾಲೆ ಆರಂಭವಾಗುತ್ತಿದೆ. ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಮಕ್ಕಳಿಗೆ ಒಳ್ಳೆಯ ವಾತಾವರಣ ನಿರ್ಮಾಣವಾಗಲಿ ಎನ್ನುವ ಆಶಯ ನಮ್ಮದು. ಶಾಲೆಯಲ್ಲಿಯೇ ಕಲಿತಾಗ ಮಕ್ಕಳಿಗೆ ಒಳ್ಳೆಯ ಪರಿಣಾಮ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಾದ್ಯಂತ ಶಾಲೆಗಳು ಇಂದಿನಿಂದ ಪುನಾರಂಭ: ತಳಿರು ತೋರಣಗಳಿಂದ ಅಕ್ಷರ ದೇಗುಲಗಳ ಸಿಂಗರಿಸಿ, ಮಕ್ಕಳ ಸ್ವಾಗತಿಸುತ್ತಿರುವ ಶಾಲೆಗಳು
ಇದೇ ವೇಳೆ ಶಾಲಾ ಮಕ್ಕಳಿಗೆ ಶೀಘ್ರದಲ್ಲಿಯೇ ಪಠ್ಯ ಪುಸ್ತಕ, ಸಮವಸ್ತ್ರ, ಸೈಕಲ್ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಇಂದಿನಿಂದ ಎಳ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನಾರಂಭಗೊಂಡಿದ್ದು, ಈ ಮೂಲಕ 2 ವರ್ಷಗಳ ಬಳಿಕ ನಿಗದಿತ ಸಮಯಕ್ಕೆ ಶೈಕ್ಷಣಿಕ ವರ್ಷ ಆರಂಭವಾಗಿದೆ. ಅಕ್ಷರ ದೇಗುಲಗಳನ್ನು ತಳಿರು ತೋರಣಗಳಿಂದ ಸಿಂಗರಿಸಿರುವ ಶಾಲೆಗಳು, ಮಕ್ಕಳನ್ನು ಸಂತಸದಿಂದ ಸ್ವಾಗತಿಸುತ್ತಿದ್ದಾರೆ.