ಲಾಕ್‌ಡೌನ್‌ನಲ್ಲಿ 'ಇ-ಕೋರ್ಟ್ಸ್' ಬಳಕೆ: ಕರ್ನಾಟಕ ಹೈಕೋರ್ಟ್ ಗೆ 2ನೇ ಸ್ಥಾನ
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಅವಧಿ ಆರಂಭವಾದಾಗಿನಿಂದ ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ 28 ಹೈಕೋರ್ಟ್‌ಗಳ ಪೈಕಿ ಮದ್ರಾಸ್ ಹೈಕೋರ್ಟ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
Published: 16th May 2022 03:02 PM | Last Updated: 16th May 2022 06:12 PM | A+A A-

ಹೈಕೋರ್ಟ್
ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಅವಧಿ ಆರಂಭವಾದಾಗಿನಿಂದ ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ 28 ಹೈಕೋರ್ಟ್‌ಗಳ ಪೈಕಿ ಮದ್ರಾಸ್ ಹೈಕೋರ್ಟ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಪ್ರಕಟಿಸಿರುವ ಮಾಹಿತಿಯ ಪ್ರಕಾರ, 'ಇಕೋರ್ಟ್ ಸಾಧನೆಯಲ್ಲಿ ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣ ಮತ್ತು ದೆಹಲಿ ಹೈಕೋರ್ಟ್‌ಗಳು ಕ್ರಮವಾಗಿ ಮುಂದಿನ ನಾಲ್ಕು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಈ ನ್ಯಾಯಾಲಯಗಳು ಕ್ರಮವಾಗಿ 14.17 ಲಕ್ಷ, 6.92 ಲಕ್ಷ, 6.37 ಲಕ್ಷ, 5.20 ಲಕ್ಷ ಮತ್ತು 3.16 ಲಕ್ಷ ಪ್ರಕರಣಗಳನ್ನು ನಿಭಾಯಿಸಿವೆ.
ಅದೇ ರೀತಿ 28 ಹೈಕೋರ್ಟ್‌ಗಳ ವ್ಯಾಪ್ತಿಯಡಿ 28 ಜಿಲ್ಲಾ ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳನ್ನು ವ್ಯವಹರಿಸುವಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಅಲಹಾಬಾದ್, ಪಾಟ್ನಾ, ಆಂಧ್ರಪ್ರದೇಶ, ಮಧ್ಯಪ್ರದೇಶ ನಂತರದ ಸ್ಥಾನದಲ್ಲಿವೆ.
ಈ ಹೈಕೋರ್ಟ್ ಗಳ ವ್ಯಾಪ್ತಿಗಳಲ್ಲಿ ಜಿಲ್ಲಾ ನ್ಯಾಯಾಲಯಗಳು ನಡೆಸಿದ ವಿಚಾರಣೆಗಳ ಸಂಖ್ಯೆ ಕ್ರಮವಾಗಿ 28.79 ಲಕ್ಷ, 27.39 ಲಕ್ಷ, 17.51 ಲಕ್ಷ 6.80 ಲಕ್ಷ ಮತ್ತು 6.73 ಲಕ್ಷಗಳಾಗಿದೆ. ಕೋವಿಡ್ ಆರಂಭವಾದಾಗಿನಿಂದಲೂ ಜಿಲ್ಲಾ ನ್ಯಾಯಾಲಯಗಳು 1.23 ಕೋಟಿ ಪ್ರಕರಣಗಳ ವಿಚಾರಣೆ ನಡೆಸಿದರೆ ಹೈಕೋರ್ಟ್ 61.02 ಲಕ್ಷ ಪ್ರಕರಣಗಳನ್ನು ಫೆಬ್ರವರಿ 28,2022 ರವರೆಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿವೆ. ಸುಪ್ರೀಂಕೋರ್ಟ್ ಲಾಕ್ ಡೌನ್ ಆರಂಭವಾದಾಗಿನಿಂದ ಮಾರ್ಚ್ 14, 2022ರವರೆಗೂ 2. 18 ಲಕ್ಷ ಕೇಸ್ ಗಳ ವಿಚಾರಣೆ ನಡೆಸಿದೆ.
ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ದೈಹಿಕ ವಿಚಾರಣೆಗಳು ಮತ್ತು ಸಾಮಾನ್ಯ ನ್ಯಾಯಾಲಯದ ಪ್ರಕ್ರಿಯೆಗಳು ಸಾಧ್ಯವಾಗದ ಕಾರಣ ವಿಡಿಯೋ ಕಾನ್ಫರೆನ್ಸ್ ನ್ಯಾಯಾಲಯಗಳ ಮುಖ್ಯ ಆಧಾರವಾಗಿ ಹೊರಹೊಮ್ಮಿತ್ತು ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ವರದಿಯಲ್ಲಿ ತಿಳಿಸಿದೆ.