
ಸಂಗ್ರಹ ಚಿತ್ರ
ಸಿಂಧನೂರು: ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಮಗು ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಜೀವಂತವಾಗಿರುವ ಘಟನೆಯೊಂದು ರಾಯಚೂರು ಜಿಲ್ಲೆಯ ತುರ್ವಿಹಾಳ ಪಟ್ಟಣದಲ್ಲಿ ಕಂಡು ಬಂದಿದೆ.
ಮೇ 7 ರಂದು ತುರ್ವಿಹಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಈರಪ್ಪ ಅವರ ಪತ್ನಿ ಅಮರಮ್ಮ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನವಜಾತ ಶಿಶು ರಕ್ತಹೀನತೆಯಿಂದ ಬಳಲುತ್ತಿತ್ತು. ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆಯಿರುವ ಹಿನ್ನೆಲೆಯಲ್ಲಿ ವೈದ್ಯರು ದಂಪತಿಗೆ ಮಗುವನ್ನು ಸಿಂಧನೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು.
ಆದರೆ ದಂಪತಿ ಮೇ 10ರಂದು ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮೇ 14ರವರೆಗೆ (ಶನಿವಾರ) ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ವೇಗವಾಗಿ ಬಂದ ಕಾರು ಡಿಕ್ಕಿ: 4 ವರ್ಷದ ಮಗು ಸಾವು, ತಂದೆಗೆ ಗಾಯ
ವೈದ್ಯರ ಸಲಹೆಯಂತೆ ಸ್ವಗ್ರಾಮ ತುರ್ವಿಹಾಳಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುವಾಗ ಮಗು ಬದುಕಿರುವುದು ಗೊತ್ತಾಗಿದ್ದು, ದಂಪತಿಗಳಲ್ಲಿ ಸಂತಸ ತಂದಿದೆ.
ಮಗು ಬದುಕಿರುವುದು ತಿಳಿಯುತ್ತಿದ್ದಂತೆಯೇ ಸ್ಥಳೀಯ ಆಸ್ಪತ್ರೆಗೆ ದಂಪತಿಗಳು ಕರೆದುಕೊಂಡು ಹೋಗಿದ್ದು, ಈ ವೇಳೆ ವೈದ್ಯರು ಮಗು ಬದುರಿಸುವುದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ಸಿಂಧನೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಶಿಶುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಶಿಶು ಮೃತಪಟ್ಟಿದೆ ಎಂದು ಘೋಷಿಸಿದ ವೈದ್ಯರ ಬಗ್ಗೆ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತುರ್ವಿಹಾಳ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ಅನಗೌಡರ್ ಅವರು ಮಾತನಾಡಿ, ಇದೇ ಕೇಂದ್ರದಲ್ಲಿ ಅಮರಮ್ಮ ಮಗುವಿಗೆ ಜನ್ಮ ನೀಡಿದ್ದರು.. ಮಗುವನ್ನು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಪೋಷಕರಿಗೆ ಸಲಹೆ ನೀಡಲಾಗಿತ್ತು. ಆದರೆ, ಅವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿಸಿದ್ದಾರೆ.