ಹಿಂದೂ ದೇವಾಲಯಗಳು ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು, ಧ್ವನಿ ವರ್ಧಕ ಬಳಕೆ ಬೇಡ: ಪೇಜಾವರ ಶ್ರೀ
ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ರಾತ್ರಿ ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಆಜಾನ್ ವೇಳೆ ಧ್ವನಿವರ್ಧಕ ಬಳಸದಿರಲು ಮುಸ್ಲಿಂ ಮುಖಂಡರು ನಿರ್ಧರಿಸಿದ್ದು, ಹಿಂದೂ ದೇವಾಲಯಗಳು ಕೂಡಾ ಕೋರ್ಟ್ ಆದೇಶವನ್ನು ಪಾಲಿಸುವಂತೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇಂದಿಲ್ಲಿ ಹೇಳಿದರು.
Published: 16th May 2022 06:21 PM | Last Updated: 16th May 2022 06:28 PM | A+A A-

ಪೇಜಾವರ ಶ್ರೀ
ಉಡುಪಿ: ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ರಾತ್ರಿ ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಆಜಾನ್ ವೇಳೆ ಧ್ವನಿವರ್ಧಕ ಬಳಸದಿರಲು ಮುಸ್ಲಿಂ ಮುಖಂಡರು ನಿರ್ಧರಿಸಿದ್ದು, ಹಿಂದೂ ದೇವಾಲಯಗಳು ಕೂಡಾ ಕೋರ್ಟ್ ಆದೇಶವನ್ನು ಪಾಲಿಸುವಂತೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇಂದಿಲ್ಲಿ ಹೇಳಿದರು.
ಸರ್ಕಾರದ ಕಾನೂನು, ನಿಯಮಗಳನ್ನು ಪಾಲಿಸುವ ಮೂಲಕ ಸಮಾಜದಲ್ಲಿ ಶಾಂತಿ ಪಾಲನೆಗೆ ಆದ್ಯತೆ ನೀಡಬೇಕು ಎಂದು ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.
ವಿಶೇಷ ಆಚರಣೆ ಸಂದರ್ಭಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಆಡಳಿತದಿಂದ ಅನುಮತಿ ಪಡೆಯಬಹುದು ಆದರೆ, ಸಾಮಾನ್ಯ ಸಂದರ್ಭಗಳಲ್ಲಿ ಸರ್ಕಾರದ ಆದೇಶಕ್ಕೆ ವಿಧೇಯರಾಗಿ ಧ್ವನಿವರ್ಧಕ ಬಳಸಬಾರದು. ಸುಪ್ರೀಂಕೋರ್ಟ್ ಆದೇಶ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ. ಆದ್ದರಿಂದ ಹಿಂದೂಗಳು ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ವಾರಣಾಸಿಯಲ್ಲಿನ ಜ್ಞಾನವಾಪಿ ಮಸೀದಿ ಸರ್ವೇ ಕಾರ್ಯ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, ಇಂತಹ ಕ್ರಮಗಳನ್ನು ಮೊದಲೇ ಮಾಡಬೇಕಿತ್ತು. ಸಮುದಾಯವೊಂದು ಮತ್ತೊಂದು ಸಮುದಾಯದ ಭೂಮಿ ಖರೀದಿಸಿದ್ದರೆ ಅದು ಕಾನೂನು ಬದ್ಧವಾಗಿರುತ್ತದೆ. ಆದರೆ, ಈ ಕೇಸ್ ನಲ್ಲಿ ಒತ್ತುವರಿ ಭೂಮಿಯಲ್ಲಿ ಮಸೀದಿ ನಿರ್ಮಿಸಲಾಗಿದೆ. ಅದನ್ನು ವಶಕ್ಕೆ ಪಡೆದು ನ್ಯಾಯಬದ್ಧ ಸಮುದಾಯಕ್ಕೆ ನೀಡಬೇಕು ಎಂದು ಪ್ರತಿಪಾದಿಸಿದರು.
ಬೇರೆ ಸಮುದಾಯದವರು ಇದನ್ನು ತಮ್ಮ ಸಮುದಾಯಕ್ಕಾದ ಹಿನ್ನೆಡೆ ಎಂದು ಭಾವಿಸಬಾರದು. ಒಂದು ವೇಳೆ ಹಿಂದೆ ಅಲ್ಲಿ ದೇವಾಲಯವಿದ್ದರೆ ಹಿಂದೂಗಳು ತಮ್ಮ ಹಕ್ಕನ್ನು ಕೇಳಬೇಕು. ಒಂದು ವೇಳೆ ಅಲ್ಲಿ ದರ್ಗಾ ಇದಿದ್ದರೆ ಮುಸ್ಲಿಂರಿಗೆ ಭೂಮಿಯನ್ನು ಹಕ್ಕನ್ನು ನೀಡಬೇಕಾಗಿತ್ತು. ಆದರೆ, ಕೊನೆಯಲ್ಲಿ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಹೇಳಿದರು.