ಮೊದಲ ಬಾರಿ ಥಾಮಸ್ ಕಪ್ ಗೆಲುವು: ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದಿಂದ ಸನ್ಮಾನ
ಮೊದಲ ಬಾರಿಗೆ ಥಾಮಸ್ ಕಪ್ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ ಭಾರತ ತಂಡಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Published: 16th May 2022 03:57 PM | Last Updated: 16th May 2022 03:57 PM | A+A A-

ಲಕ್ಷ್ಯ ಸೇನ್
ಬೆಂಗಳೂರು: ಮೊದಲ ಬಾರಿಗೆ ಥಾಮಸ್ ಕಪ್ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ ಭಾರತ ತಂಡಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಬಗ್ಗು ಬಡಿದ ಭಾರತದ ತಂಡದಲ್ಲಿ ಬೆಂಗಳೂರಿನ ಆಟಗಾರ ಇರುವುದು ಕರ್ನಾಟಕಕ್ಕೆ ಮತ್ತಷ್ಟು ಹೆಮ್ಮೆ ತರಿಸಿದೆ ಎಂದು ಸಚಿವ ನಾರಾಯಣಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡಕ್ಕೆ ಮೋದಿ ಅಭಿನಂದನೆ: 1 ಕೋಟಿ ರೂ. ಬಹುಮಾನ ಘೋಷಣೆ!
ಥಾಮಸ್ ಕಪ್ ಮುಡಿಗೇರಿಸಿಕೊಂಡ ಭಾರತದ ತಂಡದಲ್ಲಿ ಬೆಂಗಳೂರಿನ ದ್ರಾವಿಡ್ ಪಡುಕೊಣೆ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಯ ಸೇನ್ ಕೂಡ ಒಬ್ಬರಾಗಿದ್ದಾರೆ. ಮೊದಲ ಸುತ್ತಿನಲ್ಲಿ ಲಕ್ಷ್ಯ ಸೇನ್ ಅವರು ಮೊದಲ ಸಿಂಗಲ್ಸ್‌ನಲ್ಲಿ ಆ್ಯಂಟನಿ ಜಿಂಟಿಂಗ್ ವಿರುದ್ಧ 8-21, 21-17,21-16 ಅಂಕಗಳೊಂದಿಗೆ ಗೆಲುವು ದಾಖಲಿಸಿದ್ದಾರೆ.
ಥಾಮಸ್ ಕಪ್ – 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದ ಭಾರತ ತಂಡಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಥಾಮಸ್ ಕಪ್‌ನಲ್ಲಿ ಮೊದಲ ಬಾರಿಗೆ ಚಿನ್ನ ಗೆಲ್ಲುವ ಮೂಲಕ ಭಾರತೀಯ ತಂಡ ಐತಿಹಾಸಿಕ ಸಾಧನೆ ಮಾಡಿದೆ. 13 ಬಾರಿ ಚಾಂಪಿಯನ್ ಇಂಡೊನೇಷ್ಯಾ ತಂಡವನ್ನು ಮಣಿಸಿರುವ ಭಾರತ ತಂಡದ ಆಟಗಾರರ ಆಟ ಶ್ಲಾಘನೀಯ. ಈ ಐತಿಹಾಸಿಕ ಗೆಲುವು ನಮ್ಮ ದೇಶದ ಯುವಜನತೆ, ಕ್ರೀಡಾ ಪಟುಗಳಿಗೆ ಸ್ಫೂರ್ತಿ ತುಂಬಲಿದೆ. ಭಾರತದ ಗೆಲುವಿನಲ್ಲಿ ತಮ್ಮದೇ ಕೊಡುಗೆ ನೀಡಿರುವ ಬೆಂಗಳೂರಿಗ ಲಕ್ಷ್ಯ ಸೇನ್ ಅವರಿಗೆ ನಮ್ಮ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನಮ್ಮ ಸರ್ಕಾರದ ವತಿಯಿಂದ ಲಕ್ಷ್ಯ ಸೇನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.