ಬಿಡಿಎ ಅಧ್ಯಕ್ಷರ ಪಿಎಗೆ 3 ಲಕ್ಷ ರೂ. ವೇತನ: ಮಾಜಿ ಕೆಎಎಸ್ ಅಧಿಕಾರಿ ಮಥಾಯಿ ಖಂಡನೆ
ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಬಿಡಿಎ ಅಧ್ಯಕ್ಷರ ಆಪ್ತ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿದ್ದಲ್ಲದೇ, ಮೂರು ಲಕ್ಷ ರೂಪಾಯಿಗೂ ಅಧಿಕ ವೇತನ ನೀಡಲಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ...
Published: 17th May 2022 06:58 PM | Last Updated: 17th May 2022 07:39 PM | A+A A-

3 ಲಕ್ಷ ರೂ. ವೇತನ
ಬೆಂಗಳೂರು: ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಬಿಡಿಎ ಅಧ್ಯಕ್ಷರ ಆಪ್ತ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿದ್ದಲ್ಲದೇ, ಮೂರು ಲಕ್ಷ ರೂಪಾಯಿಗೂ ಅಧಿಕ ವೇತನ ನೀಡಲಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು ಹೇಳಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಮಥಾಯಿ, “ಬಿಡಿಎ ಹಾಗೂ ಕರ್ನಾಟಕ ಸರ್ಕಾರದ ನಿಯಮಾವಳಿಯನ್ನು ಉಲಂಘಿಸಿ ಸೋಮಶೇಖರ್ ಎಂಬುವವರನ್ನು ಎಸ್.ಆರ್.ವಿಶ್ವನಾಥ್ರವರ ಆಪ್ತ ಸಹಾಯಕ ಹುದ್ದೆಗೆ ನೇಮಕ ಮಾಡಲಾಗಿದೆ. ಕೆಎಎಸ್ ಜೂನಿಯರ್ ಸ್ಕೇಲ್ ಹುದ್ದೆಗೆ ಕೆಎಎಸ್ ಅಲ್ಲದವರನ್ನು ನೇಮಿಸಲಾಗಿದೆ. ಈ ಹುದ್ದೆಗೆ ತಿಂಗಳಿಗೆ 50 ಸಾವಿರದಿಂದ 60 ಸಾವಿರ ರೂಪಾಯಿ ವೇತನವಿದ್ದರೂ ಬರೋಬ್ಬರಿ 3,12,002 ರೂಪಾಯಿ ಸಂಬಳವನ್ನು ಸೋಮಶೇಖರ್ರವರಿಗೆ ನೀಡಲಾಗುತ್ತಿದೆ. ಬಿಡಿಎ ಕಮಿಷನರ್ ಹಾಗೂ ಆಯುಕ್ತರಿಗೂ ಇಷ್ಟು ಸಂಬಳವಿಲ್ಲ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್
ಬಿಜೆಪಿ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಡಿಎ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿರ್ದೇಶನದಂತೆ ಸೋಮಶೇಖರ್ ನೇಮಕವಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ(ಡಿಪಿಎಆರ್) ಕಾನೂನುಬಾಹಿರ ನೇಮಕಾತಿಗೆ ಅನುಮೋದನೆ ನೀಡಿದೆ. ಹಲವು ವರ್ಷಗಳಿಂದ ನಷ್ಟದಲ್ಲಿರುವ ಬಿಡಿಎ, ಅಧ್ಯಕ್ಷರ ಆಪ್ತ ಸಹಾಯಕನಿಗೆ ದುಬಾರಿ ವೇತನ ನೀಡುತ್ತಿರುವುದರ ಹಿಂದಿನ ಉದ್ದೇಶವೇನು?, ಇದು ಖಂಡನೀಯ” ಎಂದು ಕೆ.ಮಥಾಯಿ ಹೇಳಿದ್ದಾರೆ.
ಶೀಘ್ರವೇ ಸೋಮಶೇಖರ್ರವರನ್ನು ಅಮಾನತು ಮಾಡಿ, ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಬೇಕು. ನಿಯಮಾವಳಿ ಅನ್ವಯ ವೇತನ ನೀಡಬೇಕು. ದುಬಾರಿ ವೇತನ ನೀಡಿದ್ದರಿಂದ ಈವರೆಗೆ ಬಿಡಿಎಗೆ ಆದ ನಷ್ಟವನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಂಬಳದಿಂದ ಭರಿಸಿಕೊಳ್ಳಬೇಕು. ಇಲ್ಲದಿದ್ದರೆ ವಿಧಾನಸೌಧದ ಎದುರು ಆಮ್ ಆದ್ಮಿ ಪಾರ್ಟಿಯು ಧರಣಿ ನಡೆಸಲಿದೆ” ಎಂದು ಕೆ.ಮಥಾಯಿ ಎಚ್ಚರಿಕೆ ನೀಡಿದ್ದಾರೆ.