ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆ: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷಗಳು
10ನೇ ತರಗತಿ ಮಕ್ಕಳ ಪಠ್ಯಪುಸ್ಕತಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಧ್ಯಾಯವನ್ನು ತೆಗೆದು ಹಾಕಿ ಆರೆಸ್ಸೆಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್ ಅವರ ಭಾಷಣವನ್ನು ಸೇರ್ಪಡೆಗೊಳಿಸಿರುವ ಕುರಿತು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಹರಿಹಾಯ್ದಿವೆ.
Published: 18th May 2022 10:07 AM | Last Updated: 18th May 2022 02:15 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: 10ನೇ ತರಗತಿ ಮಕ್ಕಳ ಪಠ್ಯಪುಸ್ಕತಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಧ್ಯಾಯವನ್ನು ತೆಗೆದು ಹಾಕಿ ಆರೆಸ್ಸೆಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್ ಅವರ ಭಾಷಣವನ್ನು ಸೇರ್ಪಡೆಗೊಳಿಸಿರುವ ಕುರಿತು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಹರಿಹಾಯ್ದಿವೆ.
ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಚಿವ ಬಿಸಿ. ನಾಗೇಶ್ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದರು. ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್ ಕುರಿತು ಅಧ್ಯಾಯವನ್ನು ತೆಗೆದು ಹಾಕಿಲ್ಲ. ಬದಲಾಗಿ, ಹೆಡಗೇವಾರ್ ಭಾಷಣವನ್ನು ಸೇರ್ಪಡೆಗೊಳಿಸಲಾಗಿದ ಎಂದು ಹೇಳಿದ್ದರು. ಸಚಿವರ ಸ್ಪಷ್ಟನೆ ಹೊರತಾಗಿಯೂ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ.
ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿರುವ ಡಿಕೆ.ಶಿವಕುಮಾರ್ ಅವರು, ಭಗತ್ ಸಿಂಗ್ ಕುರಿತ ಪಾಠವನ್ನು ಪಠ್ಯದಿಂದ ತೆಗೆಯಲು ನಿರ್ಧರಿಸಿರುವುದು ದೇಶವಿರೋಧಿ ಕ್ರಮ. ಇಂದು ಭಗತ್ ಸಿಂಗ್ ಪಾಠ ತೆಗೆದುಹಾಕುತ್ತಿದ್ದಾರೆ, ನಾಳೆ ಮಹಾತ್ಮ ಗಾಂಧಿ ಅವರನ್ನು ತೆಗೆದುಹಾಕುತ್ತಾರೆ. ಬ್ರಿಟಿಷ್ ವಸಾಹತುಶಾಹಿಯಿಂದ ನಮ್ಮನ್ನು ಮುಕ್ತಗೊಳಿಸಿದವರ ತ್ಯಾಗ, ಬಲಿದಾನವನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿಯವರು ಸರಣಿ ಟ್ವೀಟ್ ಮಾಡಿ, ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್ ಮಾಡಿ ಡಿಲೀಟ್ ಮಾಡುವುದು. ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. ನನ್ನ ಜತೆ ಮೈತ್ರಿ ಸರಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ‘ಆಪರೇಷನ್ ಕಮಲʼದ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ʼಸ್ವಘೋಷಿತ ಡೋಂಗಿ ರಾಷ್ಟ್ರಭಕ್ತರುʼ ಇನ್ನೇನು ಮಾಡಲು ಸಾಧ್ಯ?
ಇದನ್ನೂ ಓದಿ: ಶಾಲಾ ಪಠ್ಯದಿಂದ ಭಗತ್ ಸಿಂಗ್ ಪಾಠ ಕೈಬಿಟ್ಟು ಹುತಾತ್ಮ ಯೋಧನಿಗೆ ಕರ್ನಾಟಕ ಸರ್ಕಾರ ಅವಮಾನ ಮಾಡಿದೆ: ಕೇಜ್ರಿವಾಲ್
ಮಹಾನ್ ರಾಷ್ಟ್ರಪ್ರೇಮಿ, ಬ್ರಿಟೀಷರಿಗೆ ಸಿಂಹಸ್ವಪ್ನ, ಭಾರತಮಾತೆಯ ಹೆಮ್ಮೆಯ ಪುತ್ರ ಸರ್ದಾರ್ ಭಗತ್ ಸಿಂಗ್ ಅವರ ಪಠ್ಯಕ್ಕೆ ಕೊಕ್ ಕೊಟ್ಟು, ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಕುರಿತ ಮಾಹಿತಿಯನ್ನು ಪಠ್ಯಕ್ಕೆ ತುರುಕುತ್ತಿರುವ ಬಿಜೆಪಿ ಮತ್ತವರ ಪಟಾಲಂ ವಿಕೃತಿಗೆ ಇದು ಪರಾಕಾಷ್ಠೆ. ಭಗತ್ ಸಿಂಗ್ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದರು. ಸಂಘ ಪರಿವಾರಿಗಳು ಅದೇ ಬ್ರಿಟೀಷರಿಗೆ ಪರಿಚಾರಿಕೆ ಮಾಡಿಕೊಂಡು ಸ್ವಾತಂತ್ರ್ಯಕ್ಕಿಂತ ಗುಲಾಮಗಿರಿಯೇ ಲೇಸೆಂದುಕೊಂಡಿದ್ದರು. ಇಂಥವರು, ಭಗತ್ ಸಿಂಗ್ʼರಂಥ ರಾಷ್ಟ್ರಪ್ರೇಮಿಗಳನ್ನು ಸಹಿಸಿಕೊಳ್ಳುತ್ತಾರೆಯೇ?
ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ, ಚಾರಿತ್ರ್ಯಹೀನತೆಯೇ ಮೈವೇತ್ತ ಬಿಜೆಪಿಗೆ ರಾಜ್ಯದ ಬೆಳವಣಿಗೆಯಲ್ಲಿ ನಂಬಿಕೆ ಇಲ್ಲ. ಹಿಜಾಬ್, ಆಹಾರ, ವ್ಯಾಪಾರ, ಹಲಾಲ್ ಎಲ್ಲಾ ಆಯಿತು. ಈಗ ಪಠ್ಯಕ್ಕೆ ನೇತಾಡುತ್ತಿದೆ. ಅಭಿವೃದ್ಧಿ ಎಂದರೆ ಆ ಪಕ್ಷಕ್ಕೆ ಅಪಥ್ಯ. ಬಿಜೆಪಿಗರು ಮತ್ತು ಬ್ರಿಟೀಷರು ಇಬ್ಬರೂ ಒಂದೇ. ಒಡೆದು ಆಳುವುದೇ ಇವರ ನೀತಿ & ಧರ್ಮ. ಬ್ರಿಟೀಷ್ ಪರಂಪರೆಯನ್ನು ಬಿಜೆಪಿಗರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೂ ಮುಂದುವರಿಸಿದ್ದಾರೆ. ಜನರ ಸ್ವಾತಂತ್ರ್ಯವನ್ನು ಸಹಿಸಲು ಅವರಿಗೆ ಆಗುತ್ತಿಲ್ಲ.
ಇದನ್ನೂ ಓದಿ: ಹೆಡಗೇವಾರ್ ಭಾಷಣ ಪಠ್ಯಪುಸ್ತಕದಲ್ಲಿ ಇರಲಿದೆ: ಬಿ.ಸಿ.ನಾಗೇಶ್; ಭಗತ್ ಸಿಂಗ್ ಪಠ್ಯ ಬಿಟಿಲ್ಲ: ಇಲಾಖೆ ಸ್ಪಷ್ಟನೆ
ಪಠ್ಯವನ್ನು ವಿಕೃತಿಗೊಳಿಸುತ್ತಿರುವುದು ಎಂದರೆ, ಕನ್ನಡ ಆಸ್ಮಿತೆಯನ್ನು ಹತ್ತಿಕ್ಕುವ ಪಾತಕ ಯತ್ನ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು, ಪ್ರಶ್ನಿಸಬೇಕು. ಹೋರಾಟಕ್ಕೂ ಇಳಿಯಬೇಕು. "ಅಯ್ಯೋ.. ಕರ್ನಾಟಕ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ!!" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಸದ ಡಿ.ಕೆ ಸುರೇಶ್ ಮಾತನಾಡಿ, ಆರ್ಎಸ್ಎಸ್ ನವರು ಯಾವ್ಯಾವ ವಿಚಾರಧಾರೆಗಳನ್ನು ಯುವಕರ ಮನಸ್ಸಿನಲ್ಲಿ ತರಬೇಕು ಎಂದಿದ್ದಾರೋ ಗೊತ್ತಿಲ್ಲ. ದೇಶ ಬಹು ಸಂಸ್ಕೃತಿಯ ಇತಿಹಾಸ ಹೊಂದಿದೆ. ದೇಶದಲ್ಲಿ ಅಶಾಂತಿ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಎಲ್ಲ ವಿಚಾರದಲ್ಲಿ ಜನರನ್ನು ಗೊಂದಲದಲ್ಲಿ ಇಡುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದಾರೆ.