ರಾಜ್ಯದಲ್ಲಿ ಸೈಬರ್ ಅಪರಾಧದ ವಿರುದ್ಧ ಹೋರಾಡಲು ತಾಂತ್ರಿಕ ಪರಿಣಿತರ ಬಳಸಿಕೊಳ್ಳಲಾಗುತ್ತದೆ: ನೂತನ ಪೊಲೀಸ್ ಆಯುಕ್ತ
1991ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಿಎಚ್ ಪ್ರತಾಪ್ ರೆಡ್ಡಿ ಅವರು ಬೆಂಗಳೂರಿನ 37ನೇ ಪೊಲೀಸ್ ಆಯುಕ್ತರಾಗಿ ಮಂಗಳವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
Published: 18th May 2022 11:55 AM | Last Updated: 18th May 2022 12:28 PM | A+A A-

ನೂತನ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಶುಭಾಶಯ ಕೋರಿದರು.
ಬೆಂಗಳೂರು: 1991ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಿಎಚ್ ಪ್ರತಾಪ್ ರೆಡ್ಡಿ ಅವರು ಬೆಂಗಳೂರಿನ 37ನೇ ಪೊಲೀಸ್ ಆಯುಕ್ತರಾಗಿ ಮಂಗಳವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ತಂತ್ರಜ್ಞಾನದಲ್ಲಿ ನನಗಿರುವ ಅನುಭವಗಳನ್ನು ಕರ್ತವ್ಯದ ವೇಳೆ ಬಳಕೆ ಮಾಡುತ್ತೇನೆ. ಪ್ರತಿ ವಿಭಾಗ ಮತ್ತು ಸಿಸಿಬಿಯಲ್ಲಿ ಪ್ರಮುಖ ಅಪರಾಧ ನಿಗಾ ಘಟಕಗಳನ್ನು ಸ್ಥಾಪಿಸಲು ಮತ್ತು ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಕಮಲ್ ಪಂತ್ ಅವರ ಉತ್ತಮ ಕೆಲಸವನ್ನು ನಾನು ಯಾವುದೇ ಬದಲಾವಣೆಗಳಿಲ್ಲದೆ ಮುಂದುವರಿಸುತ್ತೇನೆ. ಬೆಂಗಳೂರು ಪ್ರಪಂಚದ ಯಾವುದೇ ಭಾಗದಲ್ಲಿ ಗುರುತಿಸಲ್ಪಟ್ಟಿರುವ ಜಾಗತಿಕ ನಗರವಾಗಿದೆ. ಪ್ರಮುಖ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳು ಅಥವಾ ಅಪರಾಧ ಪ್ರಕರಣಗಳು ವೈರಲ್ ಆಗುತ್ತಿದ್ದಂತೆಯೇ ಅವುಗಳಿಗೆ ಸೂಕ್ತ ಉತ್ತರ ನೀಡಬೇಕು.
ಇದನ್ನೂ ಓದಿ: ಬೆಂಗಳೂರು ನಗರ ನೂತನ ಪೂಲೀಸ್ ಆಯುಕ್ತರಾಗಿ ಸಿ.ಹೆಚ್ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ
ನಗರದಲ್ಲಿ ರೌಡಿಸಂ ಮಾಡುವವರು, ವಿದೇಶಿಗರಿಂದ ಅತಿಕ್ರಮಣ, ಡ್ರಗ್ಸ್ ಮತ್ತು ಜೂಜಾಟದ ಮನೆಗಳನ್ನು ಗುರ್ತಿಸಲಾಗುವುದು. ಕರ್ತವ್ಯ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ನಗರದಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣದ ಕುರಿತು ಮಾತನಾಡಿದ, ಮಹಿಳೆಯರ ಮೇಲಿನ ಅಪರಾಧಗಳನ್ನು ಸಹಿಸುವುದಿಲ್ಲ. ಕಠಿಣ ಶಿಕ್ಷೆಗಾಗಿ ತ್ವರಿತ ತನಿಖೆ ಮತ್ತು ವಿಚಾರಣೆಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದರು.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ಬಳಿಕ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಿದ್ದು, ಈ ಕುರಿತು ಮಾತನಾಡಿದ ಪ್ರತಾಪ್ ರೆಡ್ಡಿಯವರು, ಟ್ರಾಫಿಕ್ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಹಲವಾರು ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸರು ಅನುಸರಿಸುತ್ತಿರುವ ಸೈಬರ್ ಕ್ರೈಂ ವರದಿ ಮಾದರಿಯನ್ನು ದೇಶದ ಹಲವು ರಾಜ್ಯಗಳು ಅನುಸರಿಸುತ್ತಿವೆ. ಸೈಬರ್ ನಿಂದ ವಂಚನೆಗೊಳಗಾದ ಸಂತ್ರಸ್ತರು ಎಷ್ಟು ಬೇಗ ಪ್ರಕರಣ ದಾಖಲಿಸುತ್ತಾರೋ ಅಷ್ಟು ಬೇಗ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಳಿಕ ನಗರದಲ್ಲಿ ಸುಗಮ ಸಂಚಾರಕ್ಕೆ ಟೋಯಿಂಗ್ ವ್ಯವಸ್ಥೆ ಜಾರಿಗೊಳಿಸುವುದು ಅನಿವಾರ್ಯವಾಗಿದೆ. ನಗರದಲ್ಲಿ ಟೋಯಿಂಗ್ ಅನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸಣ್ಣ ಅಪಘಾತವಾದರೂ ಟೋಯಿಂಗ್ ಮಾಡಬೇಕಾಗಿದೆ. ಹೀಗಾಗಿ ಮತ್ತೆ ನಗರದಲ್ಲಿ ಟೋಯಿಂಗ್ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸರ್ಕಾರದ ಜತೆ ಶೀಘ್ರವೇ ಮಾತುಕತೆ ನಡೆಸುತ್ತೇನೆ. ಇದಕ್ಕಾಗಿ ಹೊಸ ಮಾರ್ಗಸೂಚಿ ರೂಪಿಸಲಾಗುತ್ತೆ ಎಂದು ತಿಳಿಸಿದರು.