10ನೇ ತರಗತಿ ಪಠ್ಯದಿಂದ ನಾರಾಯಣಗುರು, ಪೆರಿಯಾರ್ ಪಠ್ಯಕ್ಕೆ ಖೊಕ್: ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ತೀವ್ರ ಆಕ್ರೋಶ
ಆರ್'ಎಸ್ಎಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಅವರ ಭಾಷಣವನ್ನು ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಿರುವುದು ಇನ್ನೂ ವಿವಾದದಲ್ಲಿ ಇರುವಾಗಲೇ ಸರ್ಕಾರ ಮತ್ತೊಂದು ಎಡವಟ್ಟು ಮಾಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
Published: 19th May 2022 01:01 PM | Last Updated: 19th May 2022 02:22 PM | A+A A-

ಸಂಗ್ರಹ ಚಿತ್ರ
ಮಂಗಳೂರು: ಆರ್'ಎಸ್ಎಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಅವರ ಭಾಷಣವನ್ನು ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಿರುವುದು ಇನ್ನೂ ವಿವಾದದಲ್ಲಿ ಇರುವಾಗಲೇ ಸರ್ಕಾರ ಮತ್ತೊಂದು ಎಡವಟ್ಟು ಮಾಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಈ ಬಾರಿಯ ಎಸ್ಎಸ್ಎಲ್'ಸಿ ಸಮಾಜ ವಿಜ್ಞಾನ ಪಠ್ಯದಲ್ಲಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರು ಮತ್ತು ಪೆರಿಯಾರ್ ಅವರ ಪಠ್ಯವನ್ನು ಕಿತ್ತು ಹಾಕಲಾಗಿದೆ. ಇದು ಇವರಿಬ್ಬರ ಅನುಯಾಯಿಗಳಲ್ಲಿ ತೀವ್ರ ಅಸಮಾಧಾನವನ್ನು ಮೂಡಿಸಿದೆ.
ಶ್ರೀನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಹೆಸರಿನ ಪಠ್ಯದಲ್ಲಿ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಅಚ್ಚು ಹಾಕಲಾಗಿತ್ತು. ಅಧ್ಯಾಯ5ರ ಸಾಮಾಜಿಕ ಮತ್ತು ಧಾರ್ಮಿಕ ಚಳವಳಿ ವಿಭಾಗದಿಂದ ನಾರಾಯಣ ಗುರುಗಳು ಪಠ್ಯವನ್ನೇ ತೆಗೆದುಹಾಕಲಾಗಿದೆ. ಬ್ರಹ್ಮ ಸಮಾಜ, ಆರ್ಯ ಸಮಾಜ, ವಿವೇಕಾನಂದರ ಪಠ್ಯದ ಜತೆ ನಾರಾಯಣ ಗುರುಗಳ ಜೀವನ ಚರಿತ್ರೆಯೂ ಪಠ್ಯಪುಸ್ತಕದಲ್ಲಿತ್ತು. ನಾರಾಯಣ ಗುರುಗಳ ಜೊತೆಗೆ ಪೆರಿಯಾರ್ ಪಠ್ಯಕ್ಕೂ ಸಮಿತಿ ಇದೀಗ ಕತ್ತರಿ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಎಂಎಲ್‌ಸಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ಮಾತನಾಡಿ, ಈ ವರ್ಷ ಏಪ್ರಿಲ್‌ನಲ್ಲಿ ನಡೆದ ಶಿವಗಿರಿ ತೀರ್ಥೋದ್ಭವದ 90ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾರಾಯಣಗುರುಗಳ ಉಪದೇಶಗಳನ್ನು ಹೊಗಳಿರುವುದು ಕೇವಲ ನಾಟಕವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು: ಸಿದ್ದರಾಮಯ್ಯ
ನಾರಾಯಣ ಗುರು ಮತ್ತು ಪೆರಿಯಾರ್ ಕುರಿತ ಪಾಠಗಳ ತೆಗೆದುಹಾಕಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳನ್ನು ಮೆಚ್ಚಿಸಲು ಈ ರೀತಿ ಮಾಡಲಾಗಿದೆ. ಬಿಜೆಪಿ ಸರಕಾರ ಕೂಡಲೇ ಇಂತಹ ಮಹಾನ್ ವ್ಯಕ್ತಿಗಳ ಕುರಿತ ಪಾಠವನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಮಾಜಿ ಶಾಸಕ ಜೆ.ಆರ್.ಲೋಬೊ ಅವರು, ಈ ಬೆಳವಣಿಗೆಯು ಮಹಾನ್ ಸಮಾಜ ಸುಧಾರಕನಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.
ಪಠ್ಯಪುಸ್ತಕಗಳು ಇನ್ನೂ ಮುದ್ರಣವಾಗಬೇಕಿರುವುದರಿಂದ ಪಾಠವನ್ನು ಸೇರಿಸಲು ಸರ್ಕಾರಕ್ಕೆ ಇನ್ನೂ ಸಮಯವಿದೆ ಎಂದು ತಿಳಿಸಿದರು,
ಬಿಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ನಾರಾಯಣ ಗುರುಗಳನ್ನು ನಿರ್ಲಕ್ಷಿಸುತ್ತಿದೆ. ಈ ಹಿಂದೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೈಬಿಡಲಾಗಿತ್ತು. ಇದೀಗ ಪಾಠವನ್ನೇ ತೆಗೆದುಹಾಕಲಾಗಿದೆ. ನಾರಾಯಣ ಗುರುಗಳು ಒಂದು ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಸಿದ್ಧಾಂತವನ್ನು ಬೋಧಿಸಿದ ಆಧ್ಯಾತ್ಮಿಕ ಗುರು. ಸಮಾಜ ಸುಧಾರಣೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯ. ಇಂತಹ ಮಹಾನ್ ಪುರುಷರ ಪಾಠಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಲು ವಿಫಲರಾದರೆ, ಯುವ ಪೀಳಿಗೆಗೆ ಏನು ಕಲಿಸಲಿದ್ದೇವೆಂದು ಪ್ರಶ್ನಿಸಿದರು.