ರಾಜ್ಯಾದ್ಯಂತ ವರುಣಾರ್ಭಟ: ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿ; ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ರಾಜ್ಯದಲ್ಲಿ ಮುಂಗಾರು ಪೂರ್ವ ವರುಣಾರ್ಭಟ ಅಕ್ಷರಶಃ ಜನರನ್ನು ಕಂಗೆಡುವಂತೆ ಮಾಡಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ರಾಜಧಾನಿ ಬೆಂಗಳೂರು ನಲುಗಿ ಹೋಗಿದೆ.
Published: 19th May 2022 02:17 PM | Last Updated: 19th May 2022 02:31 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ವರುಣಾರ್ಭಟ ಅಕ್ಷರಶಃ ಜನರನ್ನು ಕಂಗೆಡುವಂತೆ ಮಾಡಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ರಾಜಧಾನಿ ಬೆಂಗಳೂರು ನಲುಗಿ ಹೋಗಿದೆ.
ನಗರದ ತಗ್ಗು ಪ್ರದೇಶಗಳಲ್ಲಿನ ನೂರಾರು ಬಡಾವಣೆಗಳಲ್ಲಿ ಜಲ ಪ್ರಳಯ ಉಂಟಾಗಿ ಸಾವಿರಾರು ಮನೆಗಳು ಜಲಾವೃತಗೊಂಡಿವೆ. ವರುಣನ ಅವಾಂತರಕ್ಕೆ ಇಬ್ಬರು ಕಾರ್ಮಿಕರು ನೀರಿನ ಕೊಳವೆಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಾಜಕಾಲುವೆಗಳು ಉಕ್ಕಿ ಹರಿದು ಹಲವು ಬಡಾವಣೆಗಳು ಮುಳುಗಡೆಯಾಗಿವೆ. ರಸ್ತೆಯಲ್ಲಿನಿಲುಗಡೆ ಮಾಡಿದ್ದ ಕಾರು, ಬೈಕ್ಗಳು ಕೊಚ್ಚಿ ಹೋಗಿವೆ.
ಕೆರೆ ಅಂಗಳದಲ್ಲೇ ನಿರ್ಮಾಣಗೊಂಡಿರುವ ಬಡಾವಣೆಗಳು ಮತ್ತೆ ಕೆರೆಗಳಾಗಿ ಬದಲಾಗಿದ್ದವು. ಇದರಿಂದಾಗಿ ಜನರು ರಾತ್ರಿಯಿಡೀ ಆತಂಕದಲ್ಲೇ ಕಾಲ ಕಳೆದರು.
ನಗರದಲ್ಲಿ ದಾಖಲೆ ಮಳೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 1971 ರಿಂದ ಇಲ್ಲಿಯವರೆಗೆ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿರುವುದು ಇದೇ ಮೊದಲು. ಮೇ 1 ರಿಂದ ಮೇ 18ರವರೆಗೆ 210 ಮಿ.ಮೀ ಮಳೆಯಾಗಿದೆ. ಮಂಗಳವಾರ ಕೇವಲ 2 ತಾಸುಗಳಲ್ಲಿ ಸರಾಸರಿ 75 ಮಿ.ಮೀ ಮಳೆ ಬಿದ್ದಿದೆ.
ನಾಲ್ವರು ಬಲಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಪ್ರವಹಿಸಿ 38 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇತ್ತ, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ರಂಗೇನಹಳ್ಳಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಹಳೆ ಕಟ್ಟಡದ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರದ ಉಲ್ಲಾಳ ಬಳಿ ಪೈಪ್ ಲೈನ್ ಗೆ ಸಿಲುಕಿ ಇಬ್ಬರು ಕಾರ್ಮಿಕರು ಮಂಗಳವಾರ ರಾತ್ರಿ ಮೃತಪಟ್ಟಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಜಿಟಿ ಜಿಟಿ ಮಳೆಕಾಟ: ವರುಣನ ಆರ್ಭಟದ ಮಧ್ಯೆ ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್
ರಾಜ್ಯಾದ್ಯಂತ ವರುಣಾರ್ಭಟ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ. ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ದಾಖಲೆ ಮಟ್ಟದಲ್ಲಿ ಮಳೆಯಾಗುತ್ತಿದೆ. ಜೂನ್-ಜುಲೈ ಮಾಸದಲ್ಲಿ ಕಂಡು ಬರುತ್ತಿದ್ದ ಮಳೆ ಅವಾಂತರಗಳು ಈ ಬಾರಿ ಮೇ ಮಧ್ಯದಲ್ಲೇ ಶುರುವಾಗಿವೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಊರು-ಕೇರಿಗಳು ನಡುಗಡ್ಡೆಯಾಗಿವೆ. ಹೊಲ-ಗದ್ದೆ, ತೋಟಗಳು ಜಲಾವೃತವಾಗಿವೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿವೆ. ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ.
ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ ಘೋಷಣೆ: ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಇಂದು ಶಾಲೆಗಳಿಗೆ ರಜೆ ಘೋಷಿಸಿದೆ.
ರೆಡ್ ಅಲರ್ಟ್ ಘೋಷಣೆ: ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ, ತುಮಕೂರು, ಕೋಲಾರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅಸಾನಿ ಚಂಡಮಾರುತ ಪ್ರಭಾವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.