ಕೆರೆಗಳ ಜಾಗದಲ್ಲಿ ವಸತಿ ನಿರ್ಮಾಣ: ಸಿಎಂ ಬೊಮ್ಮಾಯಿ ಆದೇಶದ ಮೇರೆಗೆ ಅಧಿಸೂಚನೆ ರದ್ದುಪಡಿಸಿದ ಬಿಡಿಎ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆದೇಶದ ಮೇರೆಗೆ ಬಿಡಿಎ ಆಯುಕ್ತ ರಾಜೇಶ್ ಗೌಡ ಅವರು, ಮೇ 12 ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಗುರುವಾರ ರದ್ದುಪಡಿಸಿದ್ದಾರೆ.
Published: 20th May 2022 01:42 PM | Last Updated: 20th May 2022 01:57 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆದೇಶದ ಮೇರೆಗೆ ಬಿಡಿಎ ಆಯುಕ್ತ ರಾಜೇಶ್ ಗೌಡ ಅವರು, ಮೇ 12 ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಗುರುವಾರ ರದ್ದುಪಡಿಸಿದ್ದಾರೆ.
ಮಳೆಗಾಲದಲ್ಲಿ ನಗರದಲ್ಲಿ ಹೆಚ್ಚು ಸಮಸ್ಯೆಗಳು ಉದ್ಭವವಾಗುತ್ತಿದೆ. ರಾಜಕಾಲುವೆಗಳ ಅಸಮರ್ಪಕ ಕಾಮಗಾರಿ, ರಾಜಕಾಲುವೆಗಳ ಒತ್ತುವರಿ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಈ ಹಿಂದೆ ಕೆರೆ ಜಾಗಗಳಲ್ಲಿ ಬಿಡಿಎ ವಸತಿ ನಿರ್ಮಾಣ ಅಧಿಸೂಚನೆ ಹೊರಡಿಸಲಾಗಿತ್ತು. ನೀರು ನಿಲ್ಲಲು ಸರಿಯಾದ ಸ್ಥಳಗಳಿಲ್ಲದ ಸಂದರ್ಭದಲ್ಲಿ ಕರೆಗಳಲ್ಲಿ ನಿವೇಶನ ನಿರ್ಮಾಣ ಮಾಡಿದರೆ ಹೇಗೆ? ಎಂಬ ಪ್ರಶ್ನೆ ಉದ್ಭವಿಸಿತ್ತು.
ಇದನ್ನೂ ಓದಿ: ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಧಾರಕಾರ ಮಳೆಗೆ ರಾಜಕಾಲುವೆಗಳು ತುಂಬಿ ಹರಿದಿದ್ದು, ನೀರೆಲ್ಲಾ ರಸ್ತೆ ಮೇಲೆ ಬಂದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಗಲ್ಲಿ ಪ್ರದೇಶಗಳಲ್ಲಿನ ನಿವಾಸಗಳ ನೆಲಮಹಡಿಯೊಳಗೆ ನೀರು ನುಗ್ಗಿದೆ. ಪಾರ್ಕಿಂಗ್ ಮಾಡಿದ್ದ ದ್ವಿಚಕ್ರವಾಹನಗಳು ನೀರಿನಲ್ಲಿ ತೇಲುತ್ತಿರುವುದು ಬಂದಿದೆ. ಇದಕ್ಕೆ ಕಾರಣ ರಾಜಕಾಲುವೆಗಳ ಒತ್ತುವರಿ ಎಂದು ಹೇಳಲಾಗುತ್ತಿದ್ದು, ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ನಗರದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಕೆರೆಗಳ ಜಾಗದಲ್ಲಿ ವಸತಿ ನಿರ್ಮಾಣ ಅಧಿಸೂಚನೆಯನ್ನು ರದ್ದುಪಡಿಸುವಂತೆ ಸೂಚಿಸಿತ್ತು. ಸರ್ಕಾರದ ಆದೇಶದಂತೆ ಇದೀಗ ಅಧಿಸೂಚನೆಯನ್ನು ಬಿಡಿಎ ರದ್ದುಪಡಿಸಿದೆ.
ಜಲ ತಜ್ಞ ಎಸ್ ವಿಶ್ವನಾಥನ್ ಅವರು ಈ ಹಿಂದೆ ಟ್ವೀಟ್ ವೊಂದನ್ನು ಮಾಡಿದ್ದರು. ನಗರದಲ್ಲಿದ್ದ ಕೆರೆಗಳು ಕಣ್ಮರೆಯಾಗುತ್ತಿರುವ ಕುರಿತು ಟ್ವೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ಬೆಂಗಳೂರು ನಗರ, ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ, ದೊಡ್ಡಬೆಟ್ಟಹಳ್ಳಿ ಗ್ರಾಮದ ಸರ್ವೆ ನಂ.1 ಮತ್ತು 56ರಲ್ಲಿನ ಒಟ್ಟು 4 ಎಕರೆ 2 ಗುಂಟೆ ವಿಸ್ತೀರ್ಣದಲ್ಲಿನ ಹೆಚ್ಚಿನ ಪ್ರದೇಶವನ್ನು ಆರ್'ಎಂಪಿ-2015ರ ಮಹಾಯೋಜನೆಯಲ್ಲಿ ವರ್ಗೀಕರಿಸಿರುವಂತೆ ಜಲಾವೃತ ಪ್ರದೇಶ ವಲಯದಿಂದ ಕಾರ್ಟೊಗ್ರಾಫಿಕಲ್ ಎರರ್ ಅಡಿಯಲ್ಲಿ ವಸತಿ ವಲಯಕ್ಕಾಗಿ ಭೂಉಪಯೋಗ ಬದಲಾವಣೆಗೆ ಕಾಸಾ ಗ್ರ್ಯಾಂಡ್ ಗಾರ್ಡನ್ ಸಿಟಿ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸತೀಶ್ ಅವರು ಕೋರಿದ್ದಾರೆಂದು ಹೇಳಿಕೊಂಡಿದ್ದರು.