ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ: ವ್ಯಕ್ತಿ ಬಂಧನ
ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದ ದುಷ್ಕರ್ಮಿಯನ್ನು ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published: 20th May 2022 01:06 PM | Last Updated: 20th May 2022 01:47 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದ ದುಷ್ಕರ್ಮಿಯನ್ನು ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಶಾಂತಿನಗರ ನಿವಾಸಿ ಸುಭಾಷ್ ಗುಪ್ತಾ ಎಂದು ಗುರುತಿಸಲಾಗಿದೆ. ವಿಚ್ಛೇದಿತ ಅಕ್ಕನ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ಮಾಡಿದ್ದ ಸುಭಾಷ್, ಅದಕ್ಕಾಗಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ: ಕೆಲಕಾಲ ಆತಂಕ
ದೂರವಾಣಿ ಕರೆ ಬರುತ್ತಿದ್ದಂತೆಯೇ ನಿಯಂತ್ರಣ ಕೊಠಡಿಯಲ್ಲಿದ್ದ ಡಿಸ್'ಪ್ಲೇ ನಲ್ಲಿ ವ್ಯಕ್ತಿಯ ಸಂಪರ್ಕದ ಮಾಹಿತಿಗಳು ಬಹಿರಂಗಗೊಂಡಿತ್ತು. ಕೂಡಲೇ ಅಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿಗಳನ್ನು ರವಾನಿಸಿದ್ದರು.
ಇದರಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪಿ ತನ್ನ ಭಾವನ ದೂರವಾಣಿ ಸಂಖ್ಯೆಯಿಂದಲೇ ಕರೆ ಮಾಡಿದ್ದನೇ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆಂದು ತಿಳಿದುಬಂದಿದೆ.