ಸಾರಿಗೆ ಸಚಿವ ಶ್ರೀರಾಮುಲು ರಾಜೀನಾಮೆಗೆ ಸಾಮಾಜಿಕ ಕಾರ್ಯಕರ್ತರ ಆಗ್ರಹ
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೊಟ್ಯಾಂತರ ರೂ. ಬೆಲೆ ಬಾಳುವ ಸುಮಾರು 27 ಎಕರೆ ಸರ್ಕಾರಿ ಜಮೀನು ಕಬಳಿಸಿದ್ದಾರೆಂದು ಸಾಮಾಜಿಕ ಹೋರಾಟಗಾರ ಹಾಗೂ ಸಮಾಜ ಪರಿವರ್ತನಾ ಸಮಿತಿ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಿಸಿದ್ದಾರೆ.
Published: 20th May 2022 07:29 AM | Last Updated: 20th May 2022 01:16 PM | A+A A-

ಸಚಿವ ಶ್ರೀರಾಮುಲು
ಮೈಸೂರು: ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೊಟ್ಯಾಂತರ ರೂ. ಬೆಲೆ ಬಾಳುವ ಸುಮಾರು 27 ಎಕರೆ ಸರ್ಕಾರಿ ಜಮೀನು ಕಬಳಿಸಿದ್ದಾರೆಂದು ಸಾಮಾಜಿಕ ಹೋರಾಟಗಾರ ಹಾಗೂ ಸಮಾಜ ಪರಿವರ್ತನಾ ಸಮಿತಿ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಿಸಿದ್ದು, ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಗುರುವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಸರ್ವೆ ನಂ.597/ಬಿ ರಲ್ಲಿ ವೆಂಕಟಸ್ವಾಮಿ ಅವರ ಪತ್ನಿ ಎ.ಲಕ್ಷ್ಮಮ್ಮ ಎಂಬವರಿಗೆ ಸೇರಿದ ಒಟ್ಟು 27.25 ಎಕರೆ ಜಮೀನಿನಲ್ಲಿ 10 ಎಕರೆ ಜಮೀನನ್ನು ಸರ್ಕಾರ ನೀರಾವರಿ ಯೋಜನೆಗೆ ವಶಪಡಿಸಿಕೊಂಡಿತ್ತು. ಉಳಿದ 17 ಎಕರೆ ಜಮೀನು ದಿನಾಂಕ: 24-10-2002 ರಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಖಾಸಾ ಮಾವ ಪರಮೇಶ್ವರ ರೆಡ್ಡಿ ಎಂಬರಿಗೆ ಕ್ರಯಪತ್ರ ಮುಖೇನ ಮಾರಾಟ ಮಾಡಲಾಗಿತ್ತು.
ಇದನ್ನೂ ಓದಿ: ವಜಾಗೊಂಡಿದ್ದ ಸಾರಿಗೆ ಚಾಲಕರು- ಕಂಡಕ್ಟರ್ ಗಳ ಮರು ನೇಮಕಾತಿಗೆ ಬಿ.ಶ್ರೀರಾಮುಲು ಆದೇಶ
ಇದೇ ದಿನದಂದು ಸದರಿ ಎ.ಲಕ್ಷ್ಮಮ್ಮ ಸಚಿವ ಬಿ.ಶ್ರೀರಾಮುಲು ಅವರಿಗೆ ಮೇಲ್ಕಂಡ ಜಮೀನಿನ ಚೆಕ್ಕುಬಂದಿವುಳ್ಳ ಸರ್ಕಾರ ವಶಪಡಿಸಿಕೊಂಡಿದ್ದ 10 ಎಕರೆ ಜಮೀನು ಸೇರಿದಂತೆ ಒಟ್ಟು 27.25 ಎಕರೆ ಜಮೀನನ್ನು ಕೇವಲ 50 ರೂ. ಪತ್ರದಲ್ಲಿ ಕ್ರಯದ ಅಗ್ರಿಮೆಂಟ್ ಮಾಡಿಕೊಟ್ಟಿದ್ದರು. ಇದು ಸರ್ಕಾರದ ಕಣ್ಣಿಗೆ ಮಣ್ಣೆರೆಚಲು ಮಾಡಿಕೊಂಡ ಒಪ್ಪಂದವಾಗಿತ್ತು ಎಂದು ಹಿರೇಮಠ್ ವಿವರಣೆ ನೀಡಿದರು.
ನಂತರ ಶ್ರೀರಾಮುಲು ಅವರಿಗೆ ಅಗ್ರಿಮೆಂಟ್ ಆಗಿದ್ದ ಜಮೀನು ರಿಜಿಸ್ಟರ್ ಮಾಡಿಕೊಡದ ಕಾರಣ ಅವರು ನ್ಯಾಯಾಲಯದಲ್ಲಿ ಲಕ್ಷ್ಮಮ್ಮ ವಿರುದ್ಧ ದಾವೆ ಹೂಡಿದ್ದ ಕಾರಣ ಯಾವುದೇ ತಕರಾರು ಇಲ್ಲದೆ ಜಮೀನು ರಿಜಿಸ್ಟರ್ ಮಾಡಿಸಿಕೊಳ್ಳಲು ಕೋರ್ಟ್ ಆದೇಶಿಸಿತ್ತು. ಅಂದರೆ ಒಂದೇ ಜಮೀನು ಒಂದೇ ದಿನ ಒಬ್ಬರಿಗೆ ಕ್ರಯವಾದರೆ ಮತ್ತೊಬ್ಬರಿಗೆ ಅಗ್ರಿಮೆಂಟ್ ಮಾಡಿದ್ದು, ಪೂರ್ವನಿಯೋಜಿತ. ಈ ಬಗ್ಗೆ ಸುಪ್ರಿಂ ಕೋರ್ಟ್ಗೆ ಸಲ್ಲಿಸಿದ್ದ ಅಫೀಲು ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಸಚಿವರಿಂದ ಭೂ ಕಬಳಿಕೆ ಆಗಿರುವುದು ಸ್ಪಷ್ಟವಾಗಿದೆ. ಸಚಿವ ಶ್ರೀರಾಮುಲು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಇಲ್ಲದಿದ್ದಲ್ಲಿ ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.