ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಿಸಿ; 8 ವಾರದೊಳಗೆ ವಾರ್ಡ್ ಗಳ ಪುನರ್ ವಿಂಗಡಣೆ, ಮೀಸಲಾತಿ ಬಗ್ಗೆ ಅಧಿಸೂಚನೆ ಹೊರಡಿಸಿ: ಸುಪ್ರೀಂ ಕೋರ್ಟ್ ಆದೇಶ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ (BBMP election 2022) ಪ್ರಕ್ರಿಯೆಯನ್ನು 8 ವಾರಗಳಲ್ಲಿ ಆರಂಭಿಸಿ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
Published: 20th May 2022 01:33 PM | Last Updated: 20th May 2022 01:51 PM | A+A A-

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ (BBMP election 2022) ಪ್ರಕ್ರಿಯೆಯನ್ನು 8 ವಾರಗಳಲ್ಲಿ ಆರಂಭಿಸಿ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ವಾರ್ಡ್ ಪುನರ್ವಿಂಗಡನೆ ಹಾಗೂ ಮೀಸಲಾತಿ ಕಾರಣದಿಂದ ಪದೇ ಪದೇ ಮುಂದೂಡಲ್ಪಡುತ್ತಿರುವ ಬಿಬಿಎಂಪಿ ಚುನಾವಣೆಗೆ ಈ ಮೂಲಕ ಕೊನೆಗೂ ಮಹೂರ್ತ ನಿಗದಿಪಡಿಸುವ ಸಮಯ ಬಂದಿದೆ.
198 ವಾರ್ಡ್ಗಳನ್ನು ಹೊಂದಿರುವ ಬಿಬಿಎಂಪಿಯ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದ ಪರಿಣಾಮ ಚುನಾವಣೆ ವಿಳಂಬವಾಗಿತ್ತು.ಈ ನಡುವೆ ಕರ್ನಾಟಕ ನಗರ ಪಾಲಿಕೆಯ ಮೂರನೇ ತಿದ್ದುಪಡಿ ಕಾಯಿದೆ (2020) ಅನುಸಾರ 243 ವಾರ್ಡ್ಗಳಿಗೆ ಬದಲಾಗಿ 2020ರ ಸೆ.23ರಂದು ಹೊರಡಿಸಿರುವ ಅಧಿಸೂಚನೆಯಂತೆ 198 ವಾರ್ಡ್ಗಳಿಗೆ ಆರು ವಾರಗಳ ಒಳಗಾಗಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ 2020ರ ಡಿಸೆಂಬರ್ 4ರಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ನಂತರ ರಾಜ್ಯ ವಿಧಾನಸಭೆಯು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ 243 ವಾರ್ಡ್ಗಳಿಗೆ ಚುನಾವಣೆ ನಡೆಸಬೇಕು ಎಂಬ ನಿರ್ಣಯ ಅಂಗೀಕರಿಸಿತ್ತು. ಅಲ್ಲದೇ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿಯನ್ನು ಸರ್ಕಾರ ಸಲ್ಲಿಸಿತ್ತು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು, ಶೀಘ್ರವೇ ಬಿಬಿಎಂಪಿ ಚುನಾವಣೆ
ಇದೀಗ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು, ಬಿಬಿಎಂಪಿ ಚುನಾವಣಾ ಪ್ರಕ್ರಿಯೆಯನ್ನು ಎಂಟು ವಾರದೊಳಗಾಗಿ ನಡೆಸುವಂತೆ ತಿಳಿಸಿದೆ. ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ ವಿಂಗಡನೆ ಮತ್ತು ಮೀಸಲಾತಿಯನ್ನು ಕಾಲಮಿತಿಯೊಳಗೆ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಂದಿನ ವರ್ಷ ಏಪ್ರಿಲ್ -ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದ್ದು ಅದಕ್ಕೂ ಮುನ್ನ ಬಿಬಿಎಂಪಿ ಚುನಾವಣೆ ನಡೆಯಬೇಕಿರುವುದರಿಂದ ರಾಜ್ಯ ರಾಜಕೀಯ ವಲಯದಲ್ಲಿ ಮತ್ತಷ್ಟು ಸಂಚಲನ, ಬೆಳವಣಿಗೆ ಉಂಟಾಗುವುದರಲ್ಲಿ ಸಂಶಯವಿಲ್ಲ.