
ಸಾಂದರ್ಭಿಕ ಚಿತ್ರ
ಬೆಂಗಳೂರು: ರಸ್ತೆ ಬದಿಯ ಸ್ಟಾಲ್ ಗೆ ಊಟಕ್ಕಾಗಿ ಹೋದ ಇಬ್ಬರ ಮೇಲೆ ಬಿಸಿ ಬಾಣಲೆಯಿಂದ ಬರ್ಬರವಾಗಿ ಹಲ್ಲೆ ನಡೆಸಿರುವ ಘಟನೆ ಜಯನಗರದಲ್ಲಿ ನಡೆದಿದೆ. ಓರ್ವನಿಗೆ ಚೂರಿಯಿಂದ ಇರಿಯಲಾಗಿದೆ. ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಕೂಡಾ ಊಟಕ್ಕಾಗಿ ಸ್ಟಾಲ್ ಬಳಿ ಬಂದಾಗ ಹೊಡೆದಾಟ ನಡೆದಿದೆ. ಇಬ್ಬರು ಗಾಯಾಳುಗಳು ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ.
ಇಸ್ಟ್ ಎಂಡ್ ರಸ್ತೆಯ ಕಾರ್ತಿಕ್ ಮತ್ತು ಜಯನಗರ 9ನೇ ಬ್ಲಾಕ್ ನ ಡಿ. ಮಣಿಕಂಠ ಹಲ್ಲೆಗೊಳಗಾದವರು. ಇಬ್ಬರು ಸ್ವ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಕಾರ್ತಿಕ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಚೂರಿ ಇರಿತಕ್ಕೊಳಗಾದ ಮಣಿಕಂಠ ಜಯನಗರ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜಯನಗರ 9ನೇ ಬ್ಲಾಕಿನ ಇಸ್ಟ್ ಬಿ ಮುಖ್ಯ ರಸ್ಥೆ ಮತ್ತು ರಿಂಗ್ ರಸ್ತೆ ಬಳಿ ಭಾನುವಾರ ರಾತ್ರಿ 11.05 ಮತ್ತು 11.25 ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಮಾರನೇ ದಿನ ಪೊಲೀಸರು ದೂರು ದಾಖಲಿಸಿದ್ದು, ಬುಧವಾರ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.
ಎಗ್ ರೈಸ್ ತಿನ್ನುವಾಗ ಗಲಾಟೆ ಮಾಡುತ್ತಿದ್ದ ಆರೋಪಿಗಳನ್ನು ಸಂತ್ರಸ್ತರು ದಿಟ್ಟಿಸಿ ನೋಡಿದಾಗ ವಾಗ್ವಾದ ನಡೆದು ಹೊಡೆದಾಟ ನಡೆದಿದೆ. ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರು ಯಾವುದೇ ಡ್ರಗ್ಸ್ ಅಥವಾ ಆಲ್ಕೋಹಾಲ್ ಪ್ರಭಾವಕ್ಕೆ ಒಳಗಾಗಿರಲಿಲ್ಲ ಎಂದು ತನಿಖಾ ತಂಡದ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದರು.
ಐಪಿಸಿ ಸೆಕ್ಷನ್ 307 ಕೊಲೆ ಯತ್ನ ಸೇರಿದಂತೆ ಇತರ ಸೆಕ್ಷನ್ ಗಳ ಅಡಿ.ಲ್ಲಿ ಆರೋಪಿಗಳ ವಿರುದ್ಧ ತಿಲಕ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.