2 ವರ್ಷಗಳ ಬಳಿಕ ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ!
ವನ್ಯಜೀವಿಗಳ ಸಾಂದ್ರತೆ ಹೆಚ್ಚಿರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ಎರಡು ವರ್ಷಗಳ ನಂತರ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿದ್ದು, ಈ ಬೆಳವಣಿಗೆಯು ಸ್ಥಳೀಯರು ಹಾಗೂ ಪ್ರಕೃತಿ ಪ್ರಿಯರು ಪುಳಕಗೊಳ್ಳುವಂತೆ ಮಾಡಿದೆ.
Published: 21st May 2022 10:40 AM | Last Updated: 21st May 2022 11:57 AM | A+A A-

ಕಪ್ಪು ಚಿರತೆ
ಚಾಮರಾಜನಗರ: ವನ್ಯಜೀವಿಗಳ ಸಾಂದ್ರತೆ ಹೆಚ್ಚಿರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ಎರಡು ವರ್ಷಗಳ ನಂತರ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿದ್ದು, ಈ ಬೆಳವಣಿಗೆಯು ಸ್ಥಳೀಯರು ಹಾಗೂ ಪ್ರಕೃತಿ ಪ್ರಿಯರು ಪುಳಕಗೊಳ್ಳುವಂತೆ ಮಾಡಿದೆ.
ವನ್ಯಜೀವಿಗಳ ವಿಜ್ಞಾನಿ ಸಂಜಯ್ ಗುಬ್ಬಿ ಅವರು ಹಾಕಿದ್ದ ಕ್ಯಾಮೆರಾ ಟ್ರ್ಯಾಪ್ನಲ್ಲಿ ಕಪ್ಪು ಚಿರತೆಯ ಸೆರೆಯಾಗಿದೆ.
ಈ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಕನಕೋಟೆ ಅರಣ್ಯದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ವನ್ಯಜೀವಿ ಪ್ರೇಮಿಗಳು ಮತ್ತು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಪೊಲೀಸರ ಮೇಲೆ ಎಗರಿದ ಚಿರತೆ! ವಿಡಿಯೋ ವೈರಲ್
ಡಿಸೆಂಬರ್ 2020ರಲ್ಲಿ ಇದೇ ಗಂಡು ಚಿರತೆ ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಕಾಣಿಸಿಕೊಂಡಿತ್ತು. ಈ ಗಂಡು ಚಿರತೆಗೆ ಆರು ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನಡುವೆ 1.6 ಕಿ.ಮೀ ಅಗಲದ ವನ್ಯಜೀವಿ ಕಾರಿಡಾರ್ ಇದೆ. ಈ ಎರಡೂ ವನ್ಯಧಾಮಗಳಲ್ಲಿ ಈ ಚಿರತೆಯ ಚಲನವಲನ ದಾಖಲಾಗಿರುವುದು ಈ ಕಾರಿಡಾರ್ನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಕಾರಿಡಾರ್ನ ಸಂರಕ್ಷಿಸುವ ಅಗತ್ಯವಿದೆ. ಈ ಕಿರಿದಾದ ಕಾರಿಡಾರ್ ಮೂಲಕ ಕೊಳ್ಳೇಗಾಲ-ಹಾಸನೂರು ರಸ್ತೆ (ರಾಜ್ಯ ಹೆದ್ದಾರಿ-38) ಹಾದು ಹೋಗುತ್ತದೆ ಮತ್ತು ತಸ್ತೆಯಲ್ಲಿನ ವಾಹನ ದಟ್ಟಣೆ ವನ್ಯಜೀವಿಗಳ ಓಡಾಟಕ್ಕೆ ಅಡ್ಡಿಯಾಗಿದೆ’ ಎಂದು ಹೊಳೆಮತ್ತಿ ನೇಚರ್ ಫೌಂಡೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.