ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‌ನ ದಂಪತಿ ಸೆರೆ: 1.22 ಕೋಟಿ ರೂ. ಬೆಲೆಯ ವಸ್ತುಗಳು ವಶ
ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಾಗೂ ಕಾರಿನ ಗ್ಲಾಸ್ ಒಡೆದು ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಕುಖ್ಯಾತ ಒಜಿಕುಪ್ಪಂ ಗ್ಯಾಂಗ್‌ನ ದಂಪತಿ ಸೇರಿ ಮೂವರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ದಕ್ಷಿಣ ವಿಭಾಗದ ಪೊಲೀಸರು 1.22 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Published: 21st May 2022 06:49 PM | Last Updated: 21st May 2022 06:49 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಾಗೂ ಕಾರಿನ ಗ್ಲಾಸ್ ಒಡೆದು ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಕುಖ್ಯಾತ ಒಜಿಕುಪ್ಪಂ ಗ್ಯಾಂಗ್‌ನ ದಂಪತಿ ಸೇರಿ ಮೂವರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ದಕ್ಷಿಣ ವಿಭಾಗದ ಪೊಲೀಸರು 1.22 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ಓಜಿಕುಪ್ಪಂನ ರತ್ನಕುಮಾರ್ ಅಲಿಯಾಸ್ ರೆಡ್ಡಿ (40) ಹಾಗೂ ಆತನ ಪತ್ನಿ ಚೆನ್ನೈನ ತಾಸಿನ್‌ಫಾತಿಮಾ ಅಲಿಯಾಸ್ ತನು (36), ಭಾಮೈದ ಮಹಮದ್ ಹರ್ಷದ್ ನದೀಮ್ (34) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 998 ಗ್ರಾಂ ಚಿನ್ನ, 176 ಗ್ರಾಂ ವಜ್ರ ಸೇರಿದಂತೆ 1.22 ಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಏಪ್ರಿಲ್ 28 ರಂದು ಬೆಳಿಗ್ಗೆ 11 ರ ವೇಳೆ ವ್ಯಕ್ತಿಯೊಬ್ಬರು ತಲಘಟ್ಟಪುರದ ರಘುವನಹಳ್ಳಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‌ನಲ್ಲಿಟ್ಟಿದ್ದ 1 ಕೆ.ಜಿ. 179 ಗ್ರಾಂ ಚಿನ್ನ, 186 ಗ್ರಾಂ ವಜ್ರದ ಒಡವೆಗಳನ್ನು ತೆಗೆದುಕೊಂಡು ಬ್ಯಾಂಕ್‌ನ ಮುಂಭಾಗ ನಿಲ್ಲಿಸಿದ್ದ ಕಾರಿನಲ್ಲಿ ಆಭರಣಗಳ ಬ್ಯಾಗ್ ಇಟ್ಟು, ಪಕ್ಕದಲ್ಲಿಯೇ ನರ್ಸರಿಗೆ ಗಿಡ ಖರೀದಿಸಲು ಹೋಗಿದ್ದರು. ಮತ್ತೆ 5 ನಿಮಿಷದ ಬಳಿಕ ವಾಪಸ್ ಬಂದು ನೋಡುವಷ್ಟರಲ್ಲಿ ಕಾರಿನ ಹಿಂಭಾಗದ ಗ್ಲಾಸ್ ಒಡೆದು ಅಭರಣಗಳಿದ್ದ ಬ್ಯಾಗ್‌ನ್ನು ಕಳವು ಮಾಡಲಾಗಿತ್ತು.ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಿಸಿಪಿ ಹರೀಶ್ ಪಾಂಡೆಯವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ವಿಶೇಷ ತಂಡವು ಸಿ.ಸಿ. ಟಿವಿ ದೃಶ್ಯಗಳು, ಸ್ಥಳೀಯರಿಂದ ಮಾಹಿತಿ ಪಡೆದು ತನಿಖೆ ಕೈಗೊಂಡಾಗ ಓಜಿಕುಪ್ಪಂ ಗ್ಯಾಂಗ್‌ನ ಕೃತ್ಯವೆಂದು ತಿಳಿದು ಬಂದಿದ್ದು, ಕೂಡಲೇ ಮಾಹಿತಿ ಸಂಗ್ರಹಿಸಿ ಆರೋಪಿ ರತ್ನಕುಮಾರ್‌ನನ್ನು ಬಂಧಿಸಿ, ಆತ ನೀಡಿದ ಮಾಹಿತಿಯನ್ವಯ ಚೆನ್ನೈನ ಪಾಂಡಿಯನ್ ನಗರದಲ್ಲಿದ್ದ ಆತನ ಪತ್ನಿ ಫಾತಿಮಾಳನ್ನು ಬಂಧಿಸಲಾಗಿತ್ತು. ಇವರಿಬ್ಬರು ಕಳವು ಮಾಡಿದ ಆಭರಣಗಳನ್ನು ಚೆನ್ನೈನಲ್ಲಿದ್ದ ಭಾಮೈದ ಮಹಮದ ಹರ್ಷದ್ ನದೀಮ್‌ಗೆ ನೀಡಿ, ಆತನಿಂದ ಮಾರಾಟ ಮಾಡಿಸಲು ಸಂಚು ರೂಪಿಸಿದ್ದರು. ಕಳವು ಮಾಡಿದ್ದ ಆಭರಣಗಳಲ್ಲಿ 200 ಗ್ರಾಂ ಚಿನ್ನ ಹಾಗೂ 10 ಗ್ರಾಂ ವಜ್ರಾಭರಣಗಳನ್ನು ಈಗಾಗಲೇ ಮಾರಾಟ ಮಾಡಿ ಐಷರಾಮಿ ಜೀವನ ಸಾಗಿಸುತ್ತಿದ್ದರು. ಮಾರಾಟ ಮಾಡಲಾಗದೆ ಉಳಿದಿದ್ದ ಆಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಾಗ ಆರೋಪಿ ರತ್ನಕುಮಾರ್ ಹಳೇ ಚಾಳಿಗೆ ಬಿದ್ದ ಕಳ್ಳನಾಗಿದ್ದು, 2015 ರಿಂದ ತನ್ನ ಸಹಚರರ ಜತೆಗೂಡಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ನಗದು, ಚಿನ್ನ, ಮೊಬೈಲ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಗ್ಯಾಂಗ್ ಕಟ್ಟಿಕೊಂಡು ಕಳವು ಮಾಡುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ತಲಘಟ್ಟಪುರ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದರಾಜು, ಎಸಿಪಿ ಶಿವಕುಮಾರ್ ನೇತೃತ್ವದ ತಂಡ ಬಂಧಿಸಿದ್ದು, ಉತ್ತಮ ಕೆಲಸ ಮಾಡಿದ ತಂಡಕ್ಕೆ ಪ್ರತಾಪ್ ರೆಡ್ಡಿಯವರು ನಗದು ಬಹುಮಾನ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಹರೀಶ್ ಪಾಂಡೆ ಉಪಸ್ಥಿತರಿದ್ದರು.