ಎಸ್ಎಸ್ಎಲ್'ಸಿ ಫಲಿತಾಂಶ: ಮಕ್ಕಳ ಮಾನಸಿಕ ಒತ್ತಡ ನಿವಾರಣೆಗೆ ಸಹಾಯವಾಣಿ, ಒಂದೇ ದಿನ 458 ಜನರಿಂದ ಕರೆ!
ಎಸ್ಎಸ್ಎಲ್ಸಿ ಫಲಿತಾಂಶ ಹಿನ್ನೆಲೆಯಲ್ಲಿ ಮಕ್ಕಳ ಮಾನಸಿಕ ಒತ್ತಡ ನಿವಾರಿಸಲು ಸರ್ಕಾರ ಆರಂಭಿಸಿದ್ದ ಸಹಾಯವಾಣಿಗೆ ನಿರೀಕ್ಷೆಗೂ ಮೀರಿ ಜನರಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಒಂದೇ ದಿನ ಸುಮಾರು 458 ಮಂದಿ ದೂರವಾಣಿ ಕರೆ ಮಾಡಿ ಟೆಲಿ ಕೌನ್ಸೆಲಿಂಗ್ ಪಡೆದುಕೊಂಡಿದ್ದಾರೆ.
Published: 21st May 2022 01:28 PM | Last Updated: 21st May 2022 01:28 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶ ಹಿನ್ನೆಲೆಯಲ್ಲಿ ಮಕ್ಕಳ ಮಾನಸಿಕ ಒತ್ತಡ ನಿವಾರಿಸಲು ಸರ್ಕಾರ ಆರಂಭಿಸಿದ್ದ ಸಹಾಯವಾಣಿಗೆ ನಿರೀಕ್ಷೆಗೂ ಮೀರಿ ಜನರಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಒಂದೇ ದಿನ ಸುಮಾರು 458 ಮಂದಿ ದೂರವಾಣಿ ಕರೆ ಮಾಡಿ ಟೆಲಿ ಕೌನ್ಸೆಲಿಂಗ್ ಪಡೆದುಕೊಂಡಿದ್ದಾರೆ.
ಸಹಾಯವಾಣಿಗೆ ಈ ವರೆಗೂ 518 ಕರೆಗಳು ಬಂದಿದ್ದು, ಈ ಪೈಕಿ ಗುರುವಾರ ಒಂದೇ ದಿನ 458 ಕರೆಗಳು ಬಂದಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಉಪನಿರ್ದೇಶಕರು ಡಾ.ರಜನಿಯವರು ಹೇಳಿದ್ದಾರೆ.
ಪರೀಕ್ಷೆಯ ಫಲಿತಾಂಶ ಹೊರಬೀಳುವ ಒಂದು ದಿನ ಮೊದಲು ಅಂದರೆ ಬುಧವಾರ ಸಂಜೆ ನಿಮ್ಹಾನ್ಸ್ ಸಹಯೋಗದಲ್ಲಿ ಆರೋಗ್ಯ ಇಲಾಖೆ ಈ ಸಹಾಯವಾಣಿಯನ್ನು ಆರಂಭಿಸಿತ್ತು.
ಮನೋವೈದ್ಯರಾದ ಡಾ ರಜನಿ ಮಾತನಾಡಿ, ಫಲಿತಾಂಶ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರಿಗೆ ಸಾಕಷ್ಟು ಮಾನಸಿಕ ಒತ್ತಡಗಳು ಎದುರಾಗುತ್ತವೆ. ಒತ್ತಡ, ನಿದ್ರಾಹೀನತೆ, ಭಯ ಮತ್ತು ಚಿಂತೆ ಸಮಸ್ಯೆಗಳು ಎದುರಾಗುತ್ತವೆ. ಕೆಲವು ಮಕ್ಕಳಲ್ಲಿ ವರ್ತನೆಗಳು ಬದಲಾಗುತ್ತವೆ. ಕೊಠಡಿಯೊಳಗೆ ಬಂದ್ ಆಗುವುದು. ಮನೆ ಬಿಟ್ಟು ಓಡಿ ಹೋಗುವ ಸಂದರ್ಭಗಳೂ ಎದುರಾಗುತ್ತವೆ. ಕಡಿಮೆ ಅಂಕ ಗಳಿಸಿದರೆ ಸಮಾಜ ತಮ್ಮನ್ನು ಹೇಗೆ ನೋಡುತ್ತದೆ ಎಂಬುದನ್ನು ಮಕ್ಕಳು ಚಿಂತಿಸುತ್ತಾರೆ. ನಿರೀಕ್ಷಿತ ಮಟ್ಟದಲ್ಲಿ ಅಂಕ ಬಾರದಿದ್ದರೆ ಮಕ್ಕಳು ಚಿಂತಿತರಾಗುತ್ತಾರೆ. ಕೆಲ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳ ದೂರಾಗಿಸಲು ಸಹಾಯವಾಣಿ ಸಹಾಯ ಮಾಡುತ್ತಿದೆ.
ಸಾಕಷ್ಟು ಮಕ್ಕಳು ಫಲಿತಾಂಶ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕೆಲ ಮಕ್ಕಳು ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪೋಷಕರೊಂದಿಗೆ ಸಂಘರ್ಷ, ಬೆಂಬಲದ ಕೊರತೆಯಿಂದ ಸಮಸ್ಯೆಗೊಳಗಾಗಿರುವುದು ಕಂಡು ಬಂದಿದೆ. 28 ಜಿಲ್ಲೆಗಳ ಪೈಕಿ ಬೆಂಗಳೂರು ನಗರದಿಂದಲೇ ಅತೀ ಹೆಚ್ಚು ಕರೆಗಳು ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.