ಅಮಿತ್ ಶಾ ಭೇಟಿ ಸಾಧ್ಯವಾಗಿಲ್ಲ, ರಾಜ್ಯಸಭೆ ಚುನಾವಣೆ ಕುರಿತು ಫೋನ್'ನಲ್ಲಿ ಮಾತುಕತೆ: ಸಿಎಂ ಬೊಮ್ಮಾಯಿ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿ ಸಾಧ್ಯವಾಗಿಲ್ಲ, ರಾಜ್ಯಸಭೆ ಚುನಾವಣೆ ಕುರಿತು ಫೋನ್ ನಲ್ಲಿಯೇ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ಹೇಳಿದ್ದಾರೆ.
Published: 21st May 2022 11:43 AM | Last Updated: 21st May 2022 11:59 AM | A+A A-

ಸಿಎಂ ಬೊಮ್ಮಾಯಿ
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿ ಸಾಧ್ಯವಾಗಿಲ್ಲ, ರಾಜ್ಯಸಭೆ ಚುನಾವಣೆ ಕುರಿತು ಫೋನ್ ನಲ್ಲಿಯೇ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತು ಮತ್ತು ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ಅಮಿತ್ ಶಾ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರು ತುರ್ತು ಕೆಲಸದ ಮೇಲೆ ಬೇರೆ ಕಡೆ ಹೋಗಿದ್ದರಿಂದ ಭೇಟಿ ಮಾಡಲು ಆಗಲಿಲ್ಲ. ದೂರವಾಣಿಯಲ್ಲೇ ಸುದೀರ್ಘವಾಗಿ ಮಾತಾನಾಡಿದ್ದೇವೆ. ಸಂಪುಟದ ಕುರಿತು ಯಾವುದೇ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ: ಸಾಲು ಸಾಲು ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಸರ್ಜರಿ ಅನುಮಾನ?
ಇಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊಡಿ ಮಾತನಾಡಿದ್ದೇನೆ. ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಿಲ್ಲ. ಕೋರ್ ಕಮಿಟಿ ಚರ್ಚೆಯ ವಿಚಾರಗಳು ಮತ್ತು ಪರಿಷತ್ ಹಾಗೂ ರಾಜ್ಯಸಭೆಯ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯ ಕುರಿತು ಚರ್ಚೆ ನಡೆಸಿದ್ದೇವೆ. ಚರ್ಚೆ ವೇಳೆ ಕೋರ್ ಕಮಿಟಿ ಪಟ್ಟಿ ನೀಡಲಾಗಿದೆ. ಈ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಮಳೆ ಅವಾಂತರ ಕುರಿತು ಮಾತನಾಡಿದ ಅವರು, ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎನ್ಡಿಆರ್ಎಫ್ ನಿಧಿಯಲ್ಲಿ ಪರಿಹಾರ ಬಿಡುಗಡೆ ಮಾಡಲಾಗುವುದು. ಪರಿಸ್ಥಿತಿ ಅವಲೋಕಿಸಿ ದಾವೋಸ್ ಪ್ರವಾಸದ ಬಗ್ಗೆ ನಿರ್ಧಾರ ಮಾಡುತ್ತೇನೆಂದರು.
ಇದನ್ನೂ ಓದಿ: ಪರಿಷತ್ ಚುನಾವಣೆ: ಬಿಜೆಪಿಯಲ್ಲಿ ಶುರುವಾಯ್ತು ಒಳಜಗಳ, ಭಿನ್ನಮತ ಶಮನಗೊಳಿಸಲು ಪ್ರಹ್ಲಾದ್ ಜೋಶಿ ಸಭೆ
ಶುಕ್ರವಾರ ಸಂಜೆಯೇ ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿದ್ದ ಬೊಮ್ಮಾಯಿ, ಕೇಂದ್ರದ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಬೆಳಗಿನ ಜಾವ 1 ಗಂಟೆಗೆ ಕರ್ನಾಟಕ ಭವನಕ್ಕೆ ಬಂದು ತಂಗಿದ್ದ ಅವರು ಬೆಳಿಗ್ಗೆ 9ಕ್ಕೆ ಅರುಣ್ ಸಿಂಗ್ ಭೇಟಿಗೆ ತೆರಳಿದ್ದರು. ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.