ಗದಗ: ಮಾನವ ಸರಪಳಿ ನಿರ್ಮಿಸಿ, ಕಾರು ಸಮೇತ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಿಸಿದ ಗ್ರಾಮಸ್ಥರು!
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 2 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯು ಹಲವಾರು ಅನಾಹುತ ಸೃಷ್ಟಿ ಮಾಡಿದೆ. ಲಕ್ಷ್ಮೇಶ್ವರದಿಂದ ಬೆಳ್ಳಟ್ಟಿಗೆ ಹೋಗುವ ಮಾರ್ಗದಲ್ಲಿದ್ದ ನೆಲೂಗಲ್ಲ ಗ್ರಾಮದ ಸಮೀಪದ ಹಳ್ಳದಲ್ಲಿ ಕಾರು ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ನಾಲ್ವರನ್ನು ಗ್ರಾಮಸ್ಥರು ಹಾಗೂ ಪೊಲೀಸರು ಮಾನವ ಸರಪಳಿ...
Published: 21st May 2022 01:07 PM | Last Updated: 21st May 2022 01:07 PM | A+A A-

ನೀರಿನ ಮಧ್ಯೆ ಸಿಲುಕಿಕೊಂಡಿರುವ ಕಾರು.
ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 2 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯು ಹಲವಾರು ಅನಾಹುತ ಸೃಷ್ಟಿ ಮಾಡಿದೆ. ಲಕ್ಷ್ಮೇಶ್ವರದಿಂದ ಬೆಳ್ಳಟ್ಟಿಗೆ ಹೋಗುವ ಮಾರ್ಗದಲ್ಲಿದ್ದ ನೆಲೂಗಲ್ಲ ಗ್ರಾಮದ ಸಮೀಪದ ಹಳ್ಳದಲ್ಲಿ ಕಾರು ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ನಾಲ್ವರನ್ನು ಗ್ರಾಮಸ್ಥರು ಹಾಗೂ ಪೊಲೀಸರು ಮಾನವ ಸರಪಳಿ ನಿರ್ಮಿಸಿ ರಕ್ಷಣೆ ಮಾಡಿದ್ದಾರೆ.
ಲಕ್ಷ್ಮೇಶ್ವರದಿಂದ ಹೆಬ್ಬಳ ಗ್ರಾಮಕ್ಕೆ ಡಾ.ಪ್ರಭು ಮನ್ಸೂರ ಸೇರಿದಂತೆ ಚೆನ್ನವೀರ ಗೌಡ ಪಾಟೀಲ್, ಬಸನಗೌಡ ತೆಗ್ಗಿನಮನಿ, ವೀರೇಶ ಡಂಬಳ ಎಂಬುವವರು ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ನೆಲೂಗಲ್ಲ ಸಮೀಪ ಹಳ್ಳವು ತುಂಬಿ ಹರಿಯುತ್ತಿದ್ದರೂ. ಧೈರ್ಯ ಮಾಡಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಕಾರು ಸಿಲುಕಿಕೊಂಡಿದ್ದು, ಎಷ್ಟು ಹೊತ್ತಾದರೂ ನೀರಿನ ಹರಿವು ಕಡಿಮೆಯಾಗಿರಲಿಲ್ಲ. ಹೀಗಾಗಿ ಕಾರಿನಿಂದ ನಾಲ್ವರು ಹೊರಬಂದಿದ್ದಾರೆ. ನೀರಿನ ಹರಿವು ಹೆಚ್ಚಾದ ಕಾರಣ ಕಾರಿನಿಂದ ಹೊರಬರುತ್ತಿದ್ದಂತೆಯೇ ಕೊಚ್ಚಿ ಹೋಗಲು ಆರಂಭವಾಗಿದೆ. ಈವೇಳೆ ಮೂವರು ಮರದ ಕೊಂಬೆ ಹಿಡಿದುಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ ಮರವನ್ನು ಏರಿದ್ದಾನೆ. ಬಳಿಕ ನಾಲ್ವರೂ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ.
ಯುವಕರ ಕೂಗು ಕೇಳಿಸಿಕೊಂಡ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಜನರನ್ನೇ ಮಾನವ ಸರಪಳಿಯಾಗಿ ನಿರ್ಮಿಸಿ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಇಬ್ಬರು ಈಜು ತಜ್ಞರು ನಿಧಾನಗತಿಯಲ್ಲಿ ಈಜಿಕೊಂಡು ಯುವಕರಿದ್ದ ಮರದ ಬಳಿ ಹೋಗಿದ್ದಾರೆ. ಬಳಿಕ ಯುವಕರನ್ನು ನಿಧಾನಗತಿಯಲ್ಲಿ ಸುರಕ್ಷಿತವಾಗಿ ಕರೆತಂದು ರಕ್ಷಣೆ ಮಾಡಿದ್ದಾರೆ. ಇದು ನಮಗೆ ಸಿಕ್ಕಿರುವ ಹೊಸ ಜೀವನ. ರಕ್ಷಣೆ ಮಾಡಿದ ಎಲ್ಲರಿಗೂ ಧನ್ಯವಾದಗಳ ಹೇಳುತ್ತೇವೆಂದು ಯುವಕರು ತಿಳಿಸಿದ್ದಾರೆ.
ಸೇತುವೆ ಬಳಿ ವ್ಯಕ್ತಿಗಳು ಸಿಲುಕಿಕೊಂಡಿರುವುದನ್ನು ನೋಡಿದ್ದೆವು. ರಕ್ಷಣೆಗಾಗಿ ಕೂಗುತ್ತಿದ್ದರು. ಕೂಡಲೇ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಬಳಿಕ ಮಾನವ ಸರಪಳಿ ನಿರ್ಮಿಸಿ ನಾಲ್ವರನ್ನು ರಕ್ಷಣೆ ಮಾಡಲಾಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೊಚ್ಚಿ ಹೋದ ಯುವಕ
ಜಿಲ್ಲೆಯ ಮತ್ತೊಂದು ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ 26 ವರ್ಷದ ಯುವಕ ಮುಂಡರಗಿ ಬಳಿಯ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾನೆ.
ಮೃತ ಯುವಕನನ್ನು ಟಿಪ್ಪುಸಾಬ್ ಅಕ್ಬರಸಾಬ್ ದೊಡ್ಡಮನಿ ಎಂದು ಗುರ್ತಿಸಲಾಗಿದೆ. ರಾತ್ರಿಯ ವೇಳೆ ಮೈದುಂಬಿ ಹರಿಯುತ್ತಿರುವ ಹಳ್ಳ ಅರಿಯದೇ ಬೈಕ್‌ನಲ್ಲಿ ಹಳ್ಳ ದಾಟುವ ಸಾಹಸಕ್ಕೆ ಮುಂದಾಗಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕನ್ಯೆ ನೋಡಲು ತೆರಳಿದ್ದ ಯುವಕ ಊರಿಗೆ ವಾಪಸ್ ಬರುವಾಗ ಘಟನೆ ಸಂಭವಿಸಿದೆ. ಮೃತ ಟಿಪ್ಪುಸಾಬ್ ಜೇಬಿನಲ್ಲಿ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿದ್ದ ಮೊಬೈಲ್ ಒದ್ದೆಯಾಗದ ಕಾರಣ ಪೊಲೀಸರು ಆತನ ಮೊಬೈಲ್‌ಗೆ ಕರೆ ಮಾಡಿ ಲೋಕೇಶನ್ ಮೂಲಕ ಮೃತ ದೇಹ ಪತ್ತೆ ಮಾಡಿದ್ದಾರೆ.