ಚಿನ್ನಾಭರಣ ಅಂಗಡಿ ಕಳ್ಳತನ: ಜಾರ್ಖಂಡ್ ಮೂಲದ 10 ಮಂದಿ ಬಂಧನ
ಪ್ರಿಯದರ್ಶಿನಿ ಜ್ಯುವೆಲರ್ಸ್ ಶಾಪ್ ಗೋಡೆ ಕೊರೆದು ಗ್ಯಾಸ್ ಕಟ್ಟರ್ನಿಂದ ಲಾಕರ್ ಕತ್ತರಿಸಿ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣ ದರೋಡೆ ಮಾಡಿದ್ದ 10 ಮಂದಿ ಅಂತಾರಾಜ್ಯ ಖದೀಮರನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Published: 22nd May 2022 01:34 PM | Last Updated: 22nd May 2022 01:34 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಿಯದರ್ಶಿನಿ ಜ್ಯುವೆಲರ್ಸ್ ಶಾಪ್ ಗೋಡೆ ಕೊರೆದು ಗ್ಯಾಸ್ ಕಟ್ಟರ್ನಿಂದ ಲಾಕರ್ ಕತ್ತರಿಸಿ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣ ದರೋಡೆ ಮಾಡಿದ್ದ 10 ಮಂದಿ ಅಂತಾರಾಜ್ಯ ಖದೀಮರನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 55 ಲಕ್ಷ ರೂ. ಮೌಲ್ಯದ 1 ಕೆಜಿ 100 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಉಳಿದ ಆಭರಣಗಳನ್ನು ಎಲ್ಲಿ ಮಾರಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ರಾಜು ದೇವಾಡಿಗ ಎಂಬುವರು ಜೆಪಿನಗರ 1ನೇ ಹಂತದ ಶಾಖಾಂಬರಿ ನಗರದ 2ನೇ ಮಹಡಿಯಲ್ಲಿ ಪ್ರಿಯದರ್ಶಿನಿ ಹೆಸರಿನ ಜ್ಯುವೆಲರ್ಸ್ ತೆರೆದಿದ್ದರು. ಈ ಶಾಪ್ನಲ್ಲಿದ್ದ ಚಿನ್ನಾಭರಣಗಳನ್ನು ಗಮನಿಸಿದ್ದ ಆರೋಪಿಗಳಾದ ಎ.ಎಂ ಹುಸೇನ್, ಮನರುಲ್ಲಾಹಕ್, ಸಫ್ರುದ್ದೀನ್ ಶೇಖ್ ಹಾಗೂ ಮನರುಲ್ಲಾ ಶೇಖ್ ದರೋಡೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ, ಕಳೆದ ಮಾರ್ಚ್ನಲ್ಲಿ ಪ್ರಿಯದರ್ಶಿನಿ ಜ್ಯುವೆಲರ್ಸ್ಗೆ
ಹೊಂದಿಕೊಂಡಿರುವ ಪಕ್ಕದ ಕಟ್ಟಡದ 2ನೇ ಮಹಡಿಯಲ್ಲಿ ಆರೋಪಿಗಳು ಬಾಡಿಗೆಗೆ ಮನೆ ಪಡೆದಿದ್ದರು.
ಎರಡು ವಾರಗಳ ಕಾಲ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಮನೆಯೊಳಗಿನಿಂದ ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹಂತವಾಗಿ ಕೊರೆಯಲು ಆರಂಭಿಸಿದ್ದರು. ಏ.17ರಂದು ಗೋಡೆ ಕೊರೆದು ಜ್ಯುವೆಲರ್ಸ್ನೊಳಗೆ ನುಗ್ಗಿದ ಆರೋಪಿಗಳು, ಮೊದಲಿಗೆ ಅಲ್ಲಿದ್ದ ಸಿಸಿಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದರು.
ನಂತರ ಗ್ಯಾಸ್ ಕಟ್ಟರ್ನಿಂದ ಲಾಕರ್ ಕೊರೆದು 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ಗೋಣಿ ಚೀಲದಲ್ಲಿ ತುಂಬಿ ರಾತ್ರೋರಾತ್ರಿ ಜೆಪಿನಗರದ ಬಳಿಯಿರುವ ಲಾಡ್ಜ್ನಲ್ಲಿ ತಂಗಿದ್ದರು. ಬೆಳಗ್ಗೆ ಮಾಲೀಕ ರಾಜು, ಮಳಿಗೆ ಬಾಗಿಲು ತೆರೆದಾಗ ಕಳ್ಳತನವಾದ ಸಂಗತಿ ಬೆಳಕಿಗೆ ಬಂದಿತ್ತು. ನಂತರ ಜೆಪಿನಗರ ಠಾಣೆಗೆ ಈ ಕುರಿತು ದೂರು ನೀಡಿದ್ದರು.