ಮೊದಲ ಬಾರಿ ಸಿಎಂ ಬೊಮ್ಮಾಯಿ ವಿದೇಶ ಪ್ರವಾಸ: ನಿರಾಣಿ, ಅಶ್ವತ್ಥ್ ನಾರಾಯಣ್ ಜೊತೆ ದಾವೋಸ್'ಗೆ ಭೇಟಿ
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ವಿದೇಶಕ್ಕೆ ಭೇಟಿ ನೀಡಿದ್ದು, ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Published: 23rd May 2022 09:37 AM | Last Updated: 23rd May 2022 12:10 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ವಿದೇಶಕ್ಕೆ ಭೇಟಿ ನೀಡಿದ್ದು, ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾನುವಾರ ಬೆಳಿಗ್ಗೆ 10.35ಕ್ಕೆ ಬೆಂಗಳೂರಿನಿಂದ ಪತ್ನಿ ಚೆನ್ನಮ್ಮ ಅವರೊಂದಿಗೆ ಹೊರಟು ದುಬೈ ಮೂಲಕ ಸ್ವಿಜರ್ಲೆಂಡ್'ನ ಜೂರಿಚ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದರು. ನಂತರ ರಸ್ತೆ ಮೂಲಕ ಮಧ್ಯರಾತ್ರಿ ದಾವೋಸ್'ಗೆ ಪ್ರಯಾಣಿಸಿದರು, ಗುರುವಾರ ಬೆಳಿಗ್ಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ನಿರಾಣಿಯವರ ಪತ್ನಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ವಿಶೇಷ ಕರ್ತವ್ಯ ಅಧಿಕಾರಿ ರೋಹನ್ ಬಿರಾದರ್, ನಿರಾಣಿಯವರ ಆಪ್ತರೂ ಆಗಿರುವ ಛಾಯಾಗ್ರಾಹಕ ಶರಣಬಸಪ್ಪ ಕೂಡ ತೆರಳಿದರು. ಇವರ ಜೊತೆಗೆ ಲಂಡನ್ ನಲ್ಲಿರುವ ಐಟಿ-ಬಿಟಿ ಸಚಿವ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ಅವರೂ ಜತೆಗೂಡಲಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಸುಂಕ ಇಳಿಕೆ ಕುರಿತು ಪರಿಶೀಲನೆ: ಸಿಎಂ ಬೊಮ್ಮಾಯಿ
ಪ್ರಯಾಣಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ನಾವು ಇವತ್ತು ದಾವೋಸ್ ಗೆ ಹೋಗುತ್ತಿದ್ದೇವೆ. ನಾಳೆಯಿಂದ ಸೆಷನ್ ಆರಂಭವಾಗಲಿದೆ. ನಾಳೆ, ನಾಡಿದ್ದು ಎರಡು ಸೆಷನ್ ಗಳಲ್ಲಿ ಭಾಗವಹಿಸುತ್ತೇವೆ. ವಿಶ್ವದ ಪ್ರಖ್ಯಾತ ಕೈಗಾರಿಕೋದ್ಯಮದ ಉದ್ಯಮಿಗಳ ಭೇಟಿ ಮಾಡುತ್ತೇವೆ. ಅಲ್ಲಿನ ಕಾರ್ಯಕ್ರಮಗಳನ್ನು ಮಾಧ್ಯಮಗಳಿಗೆ ನಿರಂತರವಾಗಿ ತಲುಪಿಸುತ್ತೇವೆ. ಕೆಲವು ರಾಷ್ಟ್ರೀಯ ಮಾಧ್ಯಮಗಳೂ ಬಂದಿರುತ್ತವೆ ಎಂದರು.
ಭಾರತಕ್ಕೆ ಎಫ್ಡಿಐ ಬಹಳಷ್ಟು ಬಂದಿದೆ. ಅದರಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಕಳೆದ ನಾಲ್ಕು ಆರ್ಥಿಕ ತ್ರೈಮಾಸಿಕಗಳಲ್ಲಿ ರಾಜ್ಯಕ್ಕೆ ಹೆಚ್ಚು ಎಫ್ಡಿಐ ಹರಿದು ಬಂದಿದೆ. ಹೀಗಾಗಿ ನಮಗೆ ಉತ್ಸಾಹ ಇದೆ. ಇನ್ನೂ ಹಲವು ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ನವೆಂಬರ್ ನಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಇದೆ. ಈ ಬಾರಿ ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ತೇವೆ. ಅನೇಕ ಒಡಂಬಡಿಕೆಗಳಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.