ಕೊಡಗು: ಜನರಲ್ಲಿ ಇದಕ್ಕಿದ್ದಂತೆ ಕೆಮ್ಮು, ಕಣ್ಣು ಉರಿ! ಆತಂಕಕ್ಕೆ ಇದೇ ಕಾರಣ
ಮಂಗಳವಾರ ಬೆಳಗ್ಗೆ ಇದಕ್ಕಿದ್ದಂತೆ ಅನೇಕ ಜನರಲ್ಲಿ ಕೆಮ್ಮು ಮತ್ತು ಕಣ್ಣಿನಲ್ಲಿ ಉರಿ ಆಗುವುದರೊಂದಿಗೆ ಕೊಡಗಿನ ಸಿದ್ದಾಪುರ ಮತ್ತು ವಿರಾಜಪೇಟೆಯಾದ್ಯಂತ ಕೆಲಕಾಲ ಆತಂಕ ಉಂಟಾಯಿತು
Published: 24th May 2022 08:29 PM | Last Updated: 24th May 2022 08:29 PM | A+A A-

ಚಿಲ್ಲಿ ಸಾಸ್ ಸೋರಿಕೆಯಾದ ಟ್ರಕ್ ಚಿತ್ರ
ಮಡಿಕೇರಿ: ಮಂಗಳವಾರ ಬೆಳಗ್ಗೆ ಇದಕ್ಕಿದ್ದಂತೆ ಅನೇಕ ಜನರಲ್ಲಿ ಕೆಮ್ಮು ಮತ್ತು ಕಣ್ಣಿನಲ್ಲಿ ಉರಿ ಆಗುವುದರೊಂದಿಗೆ ಕೊಡಗಿನ ಸಿದ್ದಾಪುರ ಮತ್ತು ವಿರಾಜಪೇಟೆಯಾದ್ಯಂತ ಕೆಲಕಾಲ ಆತಂಕ ಉಂಟಾಯಿತು
ಸ್ಥಳೀಯರು ಮಾಸ್ಕ್ ಧರಿಸುವಂತೆ ಎಚ್ಚರಿಕೆ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅನೇಕ ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದೌಡಾಯಿಸಿದರು. ಟ್ರಕ್ ವೊಂದರಿಂದ ರಾಸಾಯನಿಕ ಸೋರಿಕೆಯಾಗಿರುವುದಾಗಿ ನಿವಾಸಿಗಳು ಶಂಕೆ ವ್ಯಕ್ತಪಡಿಸುತ್ತಿದ್ದರು. ಈ ಎಲ್ಲಾ ಆತಂಕಕ್ಕೆ ಚಿಲ್ಲಿ ಸಾಸ್ ಸೋರಿಕೆ ಕಾರಣ ಎಂಬುದು ಗೊತ್ತಾದ ಬಳಿಕ ಪರಿಸ್ಥಿತಿ ವಿಲಕ್ಷಣಕಾರಿಯಾಗಿ ಬದಲಾಯಿತು.
ಸಿದ್ದಾಪುರ ಮತ್ತು ವಿರಾಜಪೇಟೆಯಾದ್ಯಂತ ಅನೇಕ ಜನರಲ್ಲಿ ಕೆಮ್ಮಿನ ಲಕ್ಷಣ ಕಂಡುಬಂದ ನಂತರ ಆತಂಕದ ಕರೆಗಳನ್ನು ಸ್ವೀಕರಿಸಿದ್ದೇವೆ. ಕೆಮ್ಮು ಕಂಡುಬಂದ ನಂತರ ಖಾಸಗಿ ಆಸ್ಪತ್ರೆಗೆ ಧಾವಿಸಿದ ಆರು ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಖಚಿತಪಡಿಸಿದ್ದಾರೆ.
ಆತಂಕದ ಕರೆ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕೆಂಪು ಲಿಕ್ವಿಡ್ ರಸ್ತೆಯಲ್ಲಿ ಚೆಲ್ಲಿರುವುದನ್ನು ನೋಡಿದ್ದಾರೆ. ಕೇರಳಕ್ಕೆ ಹೋಗುತ್ತಿದ್ದ ಟ್ರಕ್ ವೊಂದರಿಂದ ಇದು ಸೋರಿಕೆಯಾಗಿರುವುದು ಕಂಡುಬಂದಿದೆ. ನಂತರ ಮಾಕುಟ ಚೆಕ್ ಫೋಸ್ಟ್ ನಲ್ಲಿ ಸಿಬ್ಬಂದಿ ಪರಿಶೀಲಿಸಿದಾಗ ಕೆಂಪು ಲಿಕ್ವಿಡ್ ಬ್ಯಾಡಗಿ ಮೆಣಿಸಿನಕಾಯಿಯಿಂದ ಬಂದ ಚಿಲ್ಲಿ ಸಾಸ್ ಎಂಬುದು ದೃಢಪಟ್ಟಿದೆ.
ದಾವಣಗೆರೆಯ ಕಾರ್ಖಾನೆಯೊಂದರಿಂದ ಸುಮಾರು 20 ಬ್ಯಾರಲ್ ಬ್ಯಾಡಗಿ ಚಿಲ್ಲಿ ಸಾಸ್ ನೊಂದಿಗೆ ಟ್ರಕ್ ಲೋಡ್ ಮಾಡಲಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದನ್ನು ಎರ್ನಾಕುಲಂಗೆ ಸಾಗಿಸಲಾಗುತಿತ್ತು. ಟ್ರಕ್ ಡ್ರೈವರ್ ಕೊಡಗಿನ ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ ಎನ್ನಲಾಗಿದೆ. ನೆಲಿಹುದಿಕೇರಿ ಬಳಿ ಖಾಸಗಿ ಬಸ್ ವೊಂದಕ್ಕೆ ಜಾಗ ನೀಡಲು ಟ್ರಕ್ ರಸ್ತೆ ಬದಿ ತೆರಳಿದಾಗ ಟ್ರಕ್ ನಿಂದ ಕೆಲ ಬ್ಯಾರಲ್ ಗೆ ಹಾನಿಯಾಗಿದ್ದು, ಸೋರಿಕೆಗೆ ಕಾರಣವಾಗಿರಬಹುದೆಂದು ಮಡಿಕೇರಿ ಗ್ರಾಮೀಣ ಪೂಲೀಸ್ ಠಾಣೆ ಎಸ್ ಐ ರವಿಕುಮಾರ್ ತಿಳಿಸಿದ್ದಾರೆ.
ರಾಸಾಯನಿಕ ಸೋರಿಕೆ ದೂರಿನ ನಂತರ ಮಾಕುಟ ಚೆಕ್ ಫೋಸ್ಟ್ ಬಳಿ ಟ್ರಕ್ ನಿಲ್ಲಿಸಲಾಗಿತ್ತು. ಟ್ರಕ್ ವಶಕ್ಕೆ ಪಡೆಯಲಾಗಿದ್ದು, ಎಫ್ ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಮಧ್ಯೆ ಸಾಸ್ ಮಾದರಿಯನ್ನು ಸಂಗ್ರಹಿಸಿರುವ ಆರೋಗ್ಯ ಇಲಾಖೆ, ಪರೀಕ್ಷೆಗಾಗಿ ಮೈಸೂರಿನ ಲ್ಯಾಬ್ ಗೆ ಕಳುಹಿಸಿದ್ದಾರೆ.