ಪಾಠಗಳನ್ನು ತೆಗೆದಿಲ್ಲ, ಇತರೆ ತರಗತಿಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಲಾಗಿದೆ: ಬರಗೂರು ರಾಮಚಂದ್ರಪ್ಪ
2014ರಲ್ಲಿ ಸಾಹಿತಿಗಳು ಮತ್ತು ಯೋಧರ ಕುರಿತ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಆರೋಪವನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ಮಂಗಳವಾರ ನಿರಾಕರಿಸಿದ್ದಾರೆ.
Published: 25th May 2022 11:19 AM | Last Updated: 25th May 2022 01:33 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: 2014ರಲ್ಲಿ ಸಾಹಿತಿಗಳು ಮತ್ತು ಯೋಧರ ಕುರಿತ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಆರೋಪವನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ಮಂಗಳವಾರ ನಿರಾಕರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಾವು ಯಾವುದೇ ಪಾಠಗಳನ್ನು ತೆಗೆದುಹಾಕಿರಲಿಲ್ಲ. ಬದಲಿಗೆ ಇತರೆ ತರಗತಿಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಲು ಮರುವಿನ್ಯಾಸ ಮಾಡಿದ್ದೆವು ಎಂದು ಹೇಳಿದ್ದಾರೆ.
ಕುವೆಂಪು ಅವರ ಬರಹಗಳು 7ನೇ ತರಗತಿ ಮತ್ತು 10ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿವೆ. ಹೈಸ್ಕೂಲ್ ಪಠ್ಯಕ್ರಮದಲ್ಲಿದ್ದ 'ಭರತ ಭೂಮಿ ನಮ್ಮ ತಾಯಿ' ಎಂಬ ಕವಿತೆಯನ್ನು ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕಲಿಯಬೇಕೆಂದು 7 ನೇ ತರಗತಿ ಪಠ್ಯದಲ್ಲಿ ಸೇರಿಸಲಾಗಿದೆ. 7 ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಗಾಂಧಿ ಬಗ್ಗೆ ಮಾಹಿತಿ ಇದ್ದರೆ, 8, 9 ಮತ್ತು 10ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಅಂಬೇಡ್ಕರ್ ಕುರಿತು ಪಾಠವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಠ್ಯಪುಸ್ತಕಗಳಲ್ಲಿ ಕೇಸರಿಕರಣ ಕಾಂಗ್ರೆಸ್ ಕಣ್ಣಿಗೆ ಮಾತ್ರ ಕಾಣಿಸುತ್ತಿದೆ: ಸಚಿವ ಬಿ.ಸಿ.ನಾಗೇಶ್
ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ನಾಡಪ್ರಭು ಕೆಂಪೇಗೌಡರ ಪಾಠಗಳು ಪ್ರೌಢಶಾಲಾ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿವೆ. 7ನೇ ತರಗತಿ ಪಠ್ಯವು ಮೈಸೂರು ಒಡೆಯರ ಕುರಿತ ಅಧ್ಯಾಯವನ್ನೂ ಹೊಂದಿದೆ. ಪ್ರಾಥಮಿಕ ಮತ್ತು ಮಧ್ಯಮ ಶಾಲೆಗಳ ಮಕ್ಕಳಿಗೆ ಮಾಹಿತಿ ನೀಡುವುದು, ಪಕ್ಷಪಾತ ಮತ್ತು ಆಧಾರರಹಿತ ವಿವರಗಳನ್ನು ನೀಡುವುದು ಮಾನದಂಡವಾಗಿತ್ತು. “2014 ರಲ್ಲಿ, 172 ತಜ್ಞರನ್ನು ಒಳಗೊಂಡ 27 ಸಮಿತಿಗಳು ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದವು, ನಾನೊಬ್ಬನೇ ಪುಸ್ತಕಗಳ ಪರಿಷ್ಕರಣೆ ಮಾಡಿರಲಿಲ್ಲ ಎಂದಿದ್ದಾರೆ.
ಸಮಾಜ ವಿಜ್ಞಾನ ಪುಸ್ತಕ ಪರಿಷ್ಕರಿಸಿಲ್ಲ
ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಎಂ.ಡಿ.ಮಾದೇಗೌಡ ಅವರು ಮಾತನಾಡಿ, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು 4ನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕವನ್ನು ಪರಿಷ್ಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.