ಮಾನಸಿಕ ಅಸ್ವಸ್ಥ ಮಹಿಳೆ, ಆಕೆಯ ನಾಲ್ಕು ಮಕ್ಕಳನ್ನು ರಕ್ಷಿಸಿದ ಆರ್‌ಪಿಎಫ್
ಆರು, ಐದು, ನಾಲ್ಕು ಮತ್ತು ಮೂರು ವರ್ಷದ ನಾಲ್ಕು ಮಕ್ಕಳೊಂದಿಗೆ ಮನೆ ಬಿಟ್ಟು ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಮಂಗಳವಾರ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.
Published: 25th May 2022 03:10 PM | Last Updated: 25th May 2022 03:10 PM | A+A A-

ಮಾನಸಿಕ ಅಸ್ವಸ್ಥ ಮಹಿಳೆ ಹಾಗೂ ಮಕ್ಕಳು
ಶಿವಮೊಗ್ಗ: ಆರು, ಐದು, ನಾಲ್ಕು ಮತ್ತು ಮೂರು ವರ್ಷದ ನಾಲ್ಕು ಮಕ್ಕಳೊಂದಿಗೆ ಮನೆ ಬಿಟ್ಟು ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಮಂಗಳವಾರ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿದ್ದಾರೆ. ಮಹಿಳೆ ಹಾಗೂ ಆಕೆಯ ಮಕ್ಕಳನ್ನು ಮಕ್ಕಳ ಸಹಾಯವಾಣಿಗೆ ಒಪ್ಪಿಸಲಾಗಿದೆ.
ನಿನ್ನೆ ಸಂಜೆ 6.30 ರ ಸುಮಾರಿಗೆ ರೈಲ್ವೆ ಪೊಲೀಸ್ ಪೇದೆ ಬಿ ಎನ್ ಕುಬೇರಪ್ಪ ಮತ್ತು ಸಿಬ್ಬಂದಿ ನಿಲ್ದಾಣದಲ್ಲಿ ಗಸ್ತು ನಡೆಸುತ್ತಿದ್ದಾಗ ನಾಲ್ವರು ಅಪ್ರಾಪ್ತ ಮಕ್ಕಳೊಂದಿಗೆ ಮಹಿಳೆಯೊಬ್ಬರು(ಮೂವರು ಹುಡುಗಿಯರು ಮತ್ತು ಒಬ್ಬ ಹುಡುಗ) ಅನುಮಾನಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿರುವುದನ್ನು ಗಮನಿಸಿದ್ದಾರೆ ಎಂದು ನೈಋತ್ಯ ರೈಲ್ವೆ(ಎಸ್‌ಡಬ್ಲ್ಯುಆರ್) ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಶಿವಮೊಗ್ಗ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ 22 ವರ್ಷದ ಮಹಾತಾಯಿ!
ರೈಲ್ವೇ ನಿಲ್ದಾಣದಲ್ಲಿ ಅಡ್ಡಾಡುತ್ತಿದ್ದ ಮಹಿಳೆಯನ್ನು ಪೊಲೀಸರು ವಿಚಾರಿಸಿದ್ದು, ಈ ವೇಳೆ ಮಹಿಳೆ ತಾನು ಎಲ್ಲಿಂದ ಬಂದಿದ್ದು ಮತ್ತು ಎಲ್ಲಿಗೆ ಹೋಗಬೇಕು ಎಂಬುದನ್ನು ಸರಿಯಾಗಿ ಹೇಳಿಲ್ಲ. ಈ ವೇಳೆ ಸುಮಾರು ಆರು ವರ್ಷದ ಆಕೆಯ ಮಗಳನ್ನು ವಿಚಾರಣೆಗೆ ಒಳಪಡಿಸಿದಾಗ ತಾವು ಬಹಳ ದಿನಗಳ ಹಿಂದೆಯೇ ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಆಕೆಯ ಹೆಸರು ಸಿಮ್ಮಿ, ತಾಯಿಯ ಹೆಸರು ಕವಿತಾ (45), ಇತರ ಇಬ್ಬರು ಸಹೋದರಿಯರ ಹೆಸರು ಗುಂಜನ್(5), ದೀಕ್ಷಾ (4) ಮತ್ತು ಸಹೋದರನ ಹೆಸರು ರಾಜ್ (3) ಎಂದು ಹೇಳಿದ್ದಾಳೆ.
ತನ್ನ ತಾಯಿ ಮಾನಸಿಕವಾಗಿ ನೊಂದಿದ್ದು, ಉತ್ತರ ಪ್ರದೇಶದ ಮನಕಪುರದ ಚಂದಾಪುರಕ್ಕೆ ಸೇರಿದವರು. ತಂದೆ ನರ್ಪಾಲ್, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಪ್ರತಿಬಾರಿಯೂ ಹಣ ಮತ್ತು ಬಟ್ಟೆ ತೆಗೆದುಕೊಂಡು ತಂದೆಗೆ ತಿಳಿಸದೆ ಮನೆಯಿಂದ ಹೊರಡುತ್ತಿದ್ದರು. ತಂದೆ ಪ್ರತಿ ಬಾರಿಯೂ ತಾಯಿಯನ್ನು ಸುರಕ್ಷಿತವಾಗಿಡಲು ಪ್ರಯತ್ನ ಮಾಡುತ್ತಿದ್ದರು. ಆದರೆ ಮಾನಸಿಕವಾಗಿ ಅಸ್ವಸ್ಥಳಾದ ತಾಯಿ ಎಲ್ಲಾ ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಇಲ್ಲಿಗೆ ಬಂದಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಮನೆಯಿಂದ ಹೊರಟಾಗಲೆಲ್ಲಾ ತನ್ನ ತಾಯಿ ಭಿಕ್ಷೆ ಬೇಡಿಕೊಂಡು ಆಹಾರ ಸಂಗ್ರಹಿಸಿ ಎಲ್ಲರಿಗೂ ಕೊಡುತ್ತಿದ್ದಳು ಎಂದು ಬಾಲಕಿ ಹೇಳಿದ್ದಾಳೆ. ಆದರೆ ತಾವು ತಾಯಿಯೊಂದಿಗೆ ಇರಲು ಬಯಸುವುದಿಲ್ಲ. ತಂದೆಯೊಂದಿಗೆ ಹೋಗಲು ಬಯಸುತ್ತೇವೆ ಎಂದು ತಿಳಿಸಿದ್ದಾಳೆ.
ಮಕ್ಕಳು ಅಪ್ರಾಪ್ತರಾಗಿರುವುದರಿಂದ ಮತ್ತು ಅವರ ತಾಯಿ ಮಾನಸಿಕ ಅಸ್ವಸ್ಥರಾಗಿರುವುದರಿಂದ ಮುಂದಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಆರ್‌ಪಿಎಫ್ ಅವರನ್ನು ಮಕ್ಕಳ ಸಹಾಯವಾಣಿ ಮತ್ತು ಶಿವಮೊಗ್ಗ ಡಿಸಿಪಿಗೆ ಹಸ್ತಾಂತರಿಸಿದೆ ಎಂದು ರೇಲ್ವೆ ಇಲಾಖೆ ತಿಳಿಸಿದೆ.