ಬೆಂಗಳೂರು: ವೃದ್ದ ಮಾಲೀಕನ ಕೊಂದು, ನಗ-ನಾಣ್ಯ ದೋಚಿ ಮನೆಕೆಲಸಗಾರ ಪರಾರಿ!
ಮನೆ ಮಾಲೀಕನ ಕೈ ಕಾಲು ಕಟ್ಟಿ ಕತ್ತು ಹಿಸುಕಿ ಹತ್ಯೆಗೈದು ನಗ-ನಾಣ್ಯ ದೋಚಿ ಮನೆಗೆಲಸಗಾರನೊಬ್ಬ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
Published: 26th May 2022 01:46 PM | Last Updated: 26th May 2022 03:13 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮನೆ ಮಾಲೀಕನ ಕೈ ಕಾಲು ಕಟ್ಟಿ ಕತ್ತು ಹಿಸುಕಿ ಹತ್ಯೆಗೈದು ನಗ-ನಾಣ್ಯ ದೋಚಿ ಮನೆಗೆಲಸಗಾರನೊಬ್ಬ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಚಾಮರಾಜಪೇಟೆ 4ನೇ ಕ್ರಾಸ್'ನ ಕಿಂಗ್ಸ್ ಎನ್'ಕ್ಲೈವ್ ಅಪಾರ್ಟ್'ಮೆಂಟ್'ನ 3ನೇ ಮಹಡಿ ನಿವಾಸಿ ಜುಗ್ ರಾಜ್ ಜೈನ್ (74) ಹತ್ಯೆಯಾದ ವೃದ್ದ ವ್ಯಕ್ತಿಯಾಗಿದ್ದಾರೆ.
ಹತ್ಯೆ ಮಾಡಿ ಪರಾರಿಯಾಗಿರುವ ಮನೆಕೆಲಸಗಾರ ರಾಜಸ್ಥಾನ ಮೂಲದ ಬಿಜಾರಾಮ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್ ಗೆ ಶಾಲಾ ಬಸ್ ಢಿಕ್ಕಿ: ಅಪಘಾತದಲ್ಲಿ ಬಾಲಕಿ ಸಾವು
ಮನೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಹೊರ ಹೋಗಿದ್ದರಿಂದ ಜುಗ್ ರಾಜ್ ಅವರು ಮನೆಯಲ್ಲಿ ಏಕಾಂಗಿಯಾಗಿದ್ದರು. ಇದರಂತೆ ಆರೋಪಿ ವೃದ್ದ ವ್ಯಕ್ತಿಯನ್ನು ಹತ್ಯೆ ಮಾಡಿ, ಮನೆಯಲ್ಲಿದ್ದ ಹಣ ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದಾನೆ.
ಜುಗ್ ರಾಜ್ ಅವರು ಅಪಾರ್ಟ್'ಮೆಂಟ್ ನಲ್ಲಿ ತಮ್ಮ ಚಿಕ್ಕ ಮಗ ಆನಂದ್ ಕುಮಾರ್, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ವಾಸವಿದ್ದರು. ಬಿಸ್'ನೆಸ್ ಟ್ರಿಪ್ ಎಂದು ಜುಗ್ ರಾಜ್ ಅವರ ಪುತ್ರ ಗೋವಾಗೆ ಹೋಗಿದ್ದಾರೆ. ಇದರಂತೆ ಸೊಸೆ ಕೂಡ ಮಕ್ಕಳನ್ನು ಕರೆದುಕೊಂಡು ಶಿಕಾರಿಪುರದಲ್ಲಿರುವ ತವರು ಮನೆಗೆ ಹೋಗಿದ್ದಾರೆ. ಇದರಂತೆ ಜುಗ್ ರಾಜ್ ಮನೆಯಲ್ಲಿ ಒಬ್ಬಂಟಿಯಾಗಿದ್ದರು.
ಜುಗ್ ರಾಜ್ ಅವರ ದೊಡ್ಡ ಮಗ ಪ್ರಕಾಶ್ ಚಂದ್ ಅವರು ಚಿಕ್ಕಪೇಟೆಯಲ್ಲಿ ಎಲೆಕ್ಟ್ರಿಕ್ ಅಂಗಡಿ ನಡೆಸುತ್ತಿದ್ದು, ಚಿಕ್ಕಪೇಟೆಯ ಜಿಕೆ ಟೆಂಪಲ್ ರಸ್ತೆಯಲ್ಲಿ ಮನೆ ಮಾಡಿಕೊಂಡಿದ್ದಾರೆ. ಮನೆಕೆಲಸ ಮಾಡಿಕೊಂಡಿದ್ದ ಬಿಜಾರಾಮ್ ಪ್ರತೀದಿನ ಜುಗ್ ರಾಜ್ ಅವರನ್ನು ಎಲೆಕ್ಟ್ರಿಕ್ ಅಂಗಡಿಗೆ ಕರೆದುಕೊಂಡು ಬಂದು ಸಂಜೆ ವೇಳೆಗೆ ಅಪಾರ್ಟ್'ಮೆಂಟ್'ಗೆ ಕರೆದುಕೊಂಡ ಹೋಗುತ್ತಿದ್ದ. ಮಂಗಳವಾರ ಕೂಡ ಜುಗ್ ರಾಜ್ ರನ್ನು ಆರೋಪಿ ಮನೆಗೆ ಕರೆದು ಬಂದಿದ್ದಾನೆ. ಇದರಂತೆ ಜುಗ್ ರಾಜ್ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ತಿಳಿದಿದ್ದ ಆರೋಪಿ, ಅವರನ್ನು ಹತ್ಯೆ ಮಾಡಿ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಅಪರಾಧವೇ ಮಾಡದೆ 13 ವರ್ಷ ಜೈಲುವಾಸ ಅನುಭವಿಸಿದ ಆದಿವಾಸಿ ವ್ಯಕ್ತಿ ಕೊನೆಗೂ ಬಿಡುಗಡೆ!
ಮನೆಗೆ ಹೋದ ತಂದೆಗೆ ಪ್ರಕಾಶ್ ಚಂದ್ ದೂರವಾಣಿ ಕರೆ ಮಾಡಿದ್ದಾರೆ. ಎಷ್ಟು ಬಾರಿ ಫೋನ್ ಮಾಡಿದರೂ ಫೋನ್ ತೆಗೆದಿಲ್ಲ. ಬಳಿಕ ಆರೋಪಿಗೆ ಕರೆ ಮಾಡಿದ್ದು, ಫೋನ್ ಸ್ವಿಚ್ ಆಫ್ ಬಂದಿದೆ. ಅನುಮಾನಗೊಂಡು ಮನೆಯ ಬಳಿಯೇ ಇದ್ದ ಸಂಬಂಧಿಕರಿಗೆ ಕರೆ ಮಾಡಿ, ಸ್ಥಳಕ್ಕೆ ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ಎಷ್ಟು ಬಾರಿ ಬಾಗಿಲು ತಟ್ಟಿದರೂ ಬಾಗಿಲು ತೆಗೆದಿಲ್ಲ. ನಂತರ ನಕಲಿ ಕೀ ಮಾಡಿಸಿ ಮನೆ ಬಾಗಿಲು ತೆಗೆಸಿದಾಗ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
ಅಪಾರ್ಟ್'ಮೆಂಟ್'ಗೆ ಡ್ರಾಪ್ ಮಾಡಿದ ಬಳಿಕ ಆರೋಪಿ ಜುಗ್ ರಾಜ್ ಅವರನ್ನು ಹತ್ಯೆ ಮಾಡಿದ್ದಾನೆ. ವೃದ್ದ ವ್ಯಕ್ತಿಯ ಕಣ್ಣಿಗೆ ಕಾರದ ಪುಡಿ ಎರಚಿದ್ದಾನೆ. ನಂತರ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.