ಬೆಂಗಳೂರು: ಸಾಹಿತಿ ಗೂರೂರು ಪಂಕಜಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ
ಸಾಹಿತಿ ಗೂರೂರು ಪಂಕಜ, ನಟಿ ರೂಪಿಕಾ, ನಟ ಅನಿರುದ್ದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಪ್ರದಾನ ಮಾಡಿದರು.
Published: 26th May 2022 11:25 PM | Last Updated: 26th May 2022 11:25 PM | A+A A-

ಆರ್ಯಭಟ ಪ್ರಶಸ್ತಿ ಪಡೆದ ಸಾಹಿತಿ ಗೂರೂರು ಪಂಕಜ
ಬೆಂಗಳೂರು: ಸಾಹಿತಿ ಗೂರೂರು ಪಂಕಜ, ನಟಿ ರೂಪಿಕಾ, ನಟ ಅನಿರುದ್ದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಪ್ರದಾನ ಮಾಡಿದರು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಆರ್ಯಭಟ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಲ್. ಎಲ್.ಎನ್ ರಾವ್ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನ್ಯಾಯಮೂರ್ತಿ ಅರಳಿ ನಾಗರಾಜ್, ಮತಪೆಟ್ಟಿಗೆಯಲ್ಲಿ ಭ್ರಷ್ಟಚಾರದ ಮೂಲ ಬೇರುಗಳಿದ್ದು, ಅದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಯುವಜನತೆ ಜಾಗೃತವಾಗಬೇಕು, ಜಾತಿಯತೆ, ಭ್ರಷ್ಟಾಚಾರದಂತಹ ಅಪಮೌಲ್ಯಗಳು ಹೆಚ್ಚಾಗುತ್ತಿರುವ ಸಂದರ್ಭಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಪ್ರತಿಜ್ಞೆ ಮಾಡೋಣ ಎಂಬ ಆಶಯ ವ್ಯಕ್ತಪಡಿಸಿದರು.
ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಸಾಧಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಷ್ಣುವರ್ಧನ್ ಅವರನ್ನು ಸ್ಮರಿಸಿದರು.
ಆರ್ಯಭಟ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಲ್. ಎಲ್.ಎನ್ ರಾವ್ ಮಾತನಾಡಿ, ಒಳ್ಳೆಯ ಸಮಾಜ ನಿರ್ಮಾಣ ಮಾಡಬೇಕಾದರೆ ಒಳ್ಳೇಯವರನ್ನು ಗುರುತಿಸಿ ಗೌರವಿಸುವುದು ಪ್ರಾಮುಖವಾದ ಕೆಲಸವಾಗಿದೆ ಎಂದರು.
ಗೂರೂರು ಪಂಕಜ ಅವರು ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮದಲ್ಲಿನ ಸೇವೆಗಾಗಿ ಬಿಎಂಶ್ರಿ ಕಾವ್ಯಪುರಸ್ಕಾರ, ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ, ರಾಜ್ಯ ಯುವ ರತ್ನ ಪ್ರಶಸ್ತಿ ಸೇರಿದಂತೆ 18 ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ.