
ವಿದ್ಯಾರ್ಥಿಗಳ ಪ್ರತಿಭಟನೆ
ಮಂಗಳೂರು: ಸ್ವಲ್ಪ ದಿನ ವಿರಾಮ ಪಡೆದುಕೊಂಡಿದ್ದ ಹಿಜಾಬ್ ವಿವಾದ ಮಂಗಳೂರಿನ ಕಾಲೇಜಿನಲ್ಲಿ ಗುರುವಾರ ಮತ್ತೆ ಹಿಜಾಬ್ ಸ್ಫೋಟಗೊಂಡಿತು. ಕೆಲ ವಿದ್ಯಾರ್ಥಿಗಳು ತರಗತಿ ಕೊಠಡಿಯೊಳಗೆ ಹಿಜಾಬ್ ಧರಿಸುತ್ತಿದ್ದಾರೆ ಎಂದು ಆರೋಪಿಸಿ ಹಂಪನಕಟ್ಟೆಯಲ್ಲಿರುವ ಯೂನಿರ್ವಸಿಟಿ ಕಾಲೇಜಿನ ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆ ಆಶ್ರಯದಲ್ಲಿ ಕಾಲೇಜ್ ಆವರಣದಲ್ಲಿ ಧರಣಿ ನಡೆಸಿದರು.
ಬೆಂಗಳೂರಿನಲ್ಲಿ ಮೇ 16 ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ನಲ್ಲಿ ಹಿಜಾಬ್ ನಿಷೇಧಿಸಿ, ಡ್ರೆಸ್ ಕೋಡ್ ಜಾರಿಗೆ ಅನುಮೋದನೆ ನೀಡಲಾಗಿತ್ತು ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ. ಆದರೆ, ಹಿಜಾಬ್ ಧರಿಸಿರಲಿಲ್ಲ, ಕಾಲೇಜ್ ಸಮವಸ್ತ್ರದಲ್ಲಿ ಸ್ಕಾರ್ಪ್ ಧರಿಸಿದ್ದಾಗಿ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಹೇಳಿದ್ದಾರೆ.
ಸ್ಕಾರ್ಫ್ ಧರಿಸಲು ಅನುಮತಿ ಇದ್ದರೂ ವಿವಿ ಸಿಂಡಿಕೇಟ್ ನಲ್ಲಿ ಇದ್ದಕ್ಕಿದ್ದಂತೆ ಸ್ಕಾರ್ಫ್ ನಿಷೇಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸಿಂಡಿಕೇಟ್ ಆದೇಶ ಎಲ್ಲರಿಗೂ ಅನ್ವಯವಾಗುವಂತೆ ಕಾಲೇಜ್ ಆಡಳಿತ ಮಂಡಳಿ ಕ್ರಮ ವಹಿಸುವಂತೆ ಎಬಿವಿಪಿ ಮುಖಂಡರು ಒತ್ತಾಯಿಸಿದರು.
ವಸ್ತ್ರ ಸಂಹಿತೆ ಕುರಿತು ಇತ್ತೀಚೆಗೆ ಸಿಂಡಿಕೇಟ್ ನಿರ್ಣಯ ಕೈಗೊಂಡಿರುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರೂ ಹಲವು ವಿದ್ಯಾರ್ಥಿಗಳು ಅದನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲೆ ಪ್ರೊ.ಅನಸೂಯಾ ರೈ ಹೇಳಿದ್ದಾರೆ.