'ಅಮೃತ ಭಾರತಿಗೆ ಕನ್ನಡದಾರತಿ' ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಮೃತ ಭಾರತಿಗೆ-ಕನ್ನಡದಾರತಿ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
Published: 28th May 2022 04:45 PM | Last Updated: 28th May 2022 04:45 PM | A+A A-

ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಅಮೃತಭಾರತಿಗೆ ಕನ್ನಡದಾರತಿ ಅಭಿಯಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಬೆಂಗಳೂರು: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಮೃತ ಭಾರತಿಗೆ-ಕನ್ನಡದಾರತಿ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಅಭಿಯಾನದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸಾವರ್ಕರ್ ಮತ್ತು ತಿಲಕರು ಮೊದಲ ಸ್ವಾತಂತ್ರ್ಯ ಹೋರಾಟಗಾರರು. ಅವರಿಗೆ ಸ್ವಾತಂತ್ರ್ಯ ಪಡೆಯಬೇಕೆಂಬ ಮೊದಲ ಆಲೋಚನೆ ಇತ್ತು. ಇವರ ಆಲೋಚನೆಗೆ ಲಾಹೋರ್ ನಲ್ಲಿ ವೇಗ ಸಿಕ್ಕಿತು ಎಂದರು.
ಲಾಹೋರ್ ಚಳವಳಿ ವೇಳೆ ಬ್ರಿಟಿಷರು ಲಾಠಿ ಪ್ರಹಾರ ನಡೆಸಿದರು. ಲಾಲಾ ಲಜಪತ್ ರಾಯ್ ನೇತೃತ್ವದಲ್ಲಿ ಚಳವಳಿ ನಡೆದಿತ್ತು. ಇದರ ನಂತರ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದರು. ಗಾಂಧಿ ನೇತೃತ್ವದಲ್ಲಿ ಅನೇಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಬಾರ್ದೋಲಿಯಲ್ಲಿ ಪಟೇಲರು ಸತ್ಯಾಗ್ರಹದ ನೇತೃತ್ವ ವಹಿಸಿದರು. ಆಗ ನಮಗೆ ಉಳಿಗಾಲವಿಲ್ಲ ಎಂದು ಬ್ರಿಟಿಷರಿಗೆ ಮನವರಿಕೆಯಾಯಿತು. ಚಂಪಾರಣ್ಯದಲ್ಲೂ ದುಡಿಯುವ ವರ್ಗ ಬ್ರಿಟಿಷರ ವಿರುದ್ಧ ತಿರುಗಿಬಿತ್ತು. ಈ ಹೋರಾಟಗಳಲ್ಲಿ ಪಾಲ್ಗೊಂಡವರಿಗೆ ಸಲಾಂ ಎಂದರು.
ಮೊಘಲರು, ಬ್ರಿಟಿಷರಿಗೆ ನಮ್ಮ ಸ್ವಾಭಿಮಾನ ಬಿಟ್ಟು ಕೊಟ್ಟಿದ್ದೆವು. ಒಂದು ಸಾವಿರ ವರ್ಷಗಳ ಕಾಲ ನಮ್ಮ ಸ್ವಾಭಿಮಾನ ಬಿಟ್ಟುಕೊಟ್ಟಿದ್ದೆವು. ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ನಾಡಿನ ಕೊಡುಗೆ ದೊಡ್ಡದಿದೆ. ಸರ್ಕಾರ ಅನಾಮಧೇಯ ಹೋರಾಟಗಾರರ ಪುಸ್ತಕವನ್ನು ಆಗಸ್ಟ್ 15ರಂದು ಪ್ರಕಟಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪಿ ಸಿ ಮೋಹನ್, ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಠ್ಯದಲ್ಲಿ ಪಾಠ ಸೇರಿಸಿ. ಕರ್ನಾಟಕದ ಮೂಲದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕಿದೆ. ಬೆಂಗಳೂರಿನ ಕೆಲ ಸ್ಥಳಗಳಿಗೆ ಬ್ರಿಟಿಷರ ಹೆಸರುಗಳಿವೆ. ಕೆಲ ಆಸ್ಪತ್ರೆಗಳಿಗೂ ಬ್ರಿಟಿಷರ ಹೆಸರುಗಳಿವೆ. ಅವು ಬದಲಿಸುವ ಕೆಲಸ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದ 75 ಸ್ಥಳಗಳಲ್ಲಿ ಏಕಕಾಲಕ್ಕೆ ‘ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಒಟ್ಟಾರೆ ರಾಜ್ಯದ 75 ಸ್ಥಳಗಳಲ್ಲಿ ಅಭಿಯಾನ ನಡೆಯಲಿದ್ದು ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಗುತ್ತದೆ.
ಪ್ರತಿ ಜಿಲ್ಲೆಗೆ 1.80 ಲಕ್ಷ ಅನುದಾನ: ಅಭಿಯಾನದ ವೆಚ್ಚ ಭರಿಸಲು ಪ್ರತಿ ಜಿಲ್ಲೆಗೆ 1.80 ಲಕ್ಷ ರುಪಾಯಿ ಅನುದಾನ ನೀಡಲಾಗಿದ್ದು ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಇಂದು 45 ಸ್ಥಳಗಳಲ್ಲಿ ಅಭಿಯಾನ ನಡೆಯಲಿದ್ದು ಜೂ.25 ಕ್ಕೆ ಉಳಿದ ಸ್ಥಳಗಳಲ್ಲಿ ನಡೆಯಲಿದೆ. ಇದಕ್ಕಾಗಿ ರಾಜ್ಯದ 75 ಸ್ಥಳಗಳನ್ನು ಗುರುತಿಸಲಾಗಿದ್ದು ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿವರಿಸಿದರು.
ಜುಲೈ 1 ರಿಂದ 15 ರವರೆಗೆ ‘ಹೋರಾಟದ ನೆಲದಲ್ಲಿ ಒಂದು ದಿನ’ ಎಂಬ ಪ್ರೇರಣಾದಾಯಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟ ನಡೆದ ನಾಡಿನ ಪ್ರಮುಖ 15 ಸ್ಥಳಗಳಲ್ಲಿ ನಾಟಕ, ಮೆರವಣಿಗೆ. ಸ್ಥಬ್ಧಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಮೆರವಣಿಗೆ ಮಾಡಲಾಗುತ್ತದೆ. ಆಗಸ್ಟ್ 1ರಿಂದ 8 ರವರೆಗೆ ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ರಥಯಾತ್ರೆ ನಡೆಸಲಾಗುವುದು. 31 ಜಿಲ್ಲೆಗಳಲ್ಲೂ ಸಂಚರಿಸುವ ರಥಯಾತ್ರೆ ಬೆಂಗಳೂರಿಗೆ ತಲುಪಲಿದೆ ಎಂದು ವಿವರಿಸಿದರು.
ಆಗಸ್ಟ್ 9 ರಂದು ಜಿಲ್ಲೆಗಳಿಂದ ಹೊರಟ ರಥಯಾತ್ರೆ ನಗರವನ್ನು ತಲುಪಲಿದ್ದು ಆಗಸ್ಟ್ 9 ರಿಂದ 11 ರವರೆಗೆ ನಗರದಲ್ಲಿ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ರಾಜಧಾನಿಯಲ್ಲಿ ಭಾರೀ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕಾಗಿ ಹಲವು ಸಮಿತಿಗಳನ್ನೂ ರಚಿಸಲಾಗಿದೆ.