ದುಬೈ ಆಸ್ಪತ್ರೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ವೈದ್ಯೆಗೆ 11 ಲಕ್ಷ ರೂ. ವಂಚನೆ: ಪೊಲೀಸರಿಗೆ ದೂರು
ದುಬೈನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆಗೊಳಗಾದ ಬೆಂಗಳೂರಿನ 46 ವರ್ಷದ ಪ್ಲಾಸ್ಟಿಕ್ ಸರ್ಜನ್ ಕುಂಬಳಗೋಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Published: 28th May 2022 01:15 PM | Last Updated: 28th May 2022 01:30 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ದುಬೈನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆಗೊಳಗಾದ ಬೆಂಗಳೂರಿನ 46 ವರ್ಷದ ಪ್ಲಾಸ್ಟಿಕ್ ಸರ್ಜನ್ ಕುಂಬಳಗೋಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಂತ್ರಸ್ತೆ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜನ್ ಕನ್ಸಲ್ಟೆಂಟ್ ಹುದ್ದೆಗೆ ತನ್ನ ಸ್ವವಿವರವನ್ನು ಅಪ್‌ಲೋಡ್ ಮಾಡಿದ್ದರು. ಕೋಲ್ಕತ್ತಾ ಮೂಲದ ಉದ್ಯೋಗ ಸಲಹೆಗಾರ ಸಂಸ್ಥೆಯೊಂದರ ಕಾರ್ಯನಿರ್ವಾಹಕ ಎಂದು ಗುರುತಿಸಿಕೊಂಡಿರುವ ವಂಚಕ ಸಂತ್ರಸ್ತೆಗೆ ಕರೆ ಮಾಡಿ, ಆಕೆ ತಮ್ಮಲ್ಲಿ ನೋಂದಾಯಿಸಿಕೊಂಡರೆ ಕೆಲಸ ಪಡೆಯಲು ಸಹಾಯ ಮಾಡುವುದಾಗಿ ನಂಬಿಸಿದ್ದರು.
ಅಪರಿಚಿತ ಕರೆ ಮಾಡಿದವರ ಹೇಳಿಕೆಯನ್ನು ನಂಬಿದ ಸಂತ್ರಸ್ತೆ ವೈದ್ಯೆ 5,000 ರೂಪಾಯಿ ಪಾವತಿಸಿ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡಿದ್ದರು. ಕೆಂಗೇರಿಯ ಬ್ರಿಗೇಡ್ ಪನೋರಮಾ ಅಪಾರ್ಟ್‌ಮೆಂಟ್‌ನ ನಿವಾಸಿ ಡಾ.ಸುಮಾ (ಹೆಸರು ಬದಲಾಯಿಸಲಾಗಿದೆ) ಎಂಬುವರು ಪಶ್ಚಿಮ ಬಂಗಾಳದ ಕರಣ್ ಸಿಂಗ್ ಎಂದು ಗುರುತಿಸಲಾದ ವಂಚಕನ ವಿರುದ್ಧ ಈಗ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವ ನೆಪದಲ್ಲಿ ಪೋಷಕರಿಗೆ 1.8 ಕೋಟಿ ರೂ. ವಂಚಿಸಿದ ಸಂಸ್ಧೆ!
ವೈದ್ಯೆ ಯುಪಿಐ ವಹಿವಾಟಿನ ಮೂಲಕ ಆರೋಪಿಗಳು ನೀಡಿದ ಖಾತೆ ಸಂಖ್ಯೆಗಳಿಗೆ ಆನ್‌ಲೈನ್ ಪಾವತಿಗಳನ್ನು ಮಾಡುತ್ತಿದ್ದರು. ದುಬೈ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಕಡ್ಡಾಯವಾಗಿರುವ ನಿರಪೇಕ್ಷಣಾ ಪ್ರಮಾಣಪತ್ರವನ್ನು ಪಡೆಯಲು ಹಣ ಪಾವತಿಸುವಂತೆ ಕೇಳಿದ್ದರು.
ಸಂಪೂರ್ಣ ವಹಿವಾಟುಗಳು ಜುಲೈ ಮತ್ತು ಆಗಸ್ಟ್ 2021 ರ ನಡುವೆ ನಡೆದಿವೆ. ವೈದ್ಯೆ ಎಂದಿಗೂ ಕಾರ್ಯನಿರ್ವಾಹಕರನ್ನು ವೈಯಕ್ತಿಕವಾಗಿ ಭೇಟಿಯಾಗಲಿಲ್ಲ, ಫೋನ್ ನಲ್ಲಿ ಮಾತ್ರ ಮಾತನಾಡುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಕನ್ಸಲ್ಟೆಂಟ್ ಸಂಸ್ಥೆಯ ವೆಬ್‌ಸೈಟ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ನಂತರ ವೈದ್ಯೆಗೆ ಅನುಮಾನ ಬಂದಿತು. ಫೋನ್ ಮಾಡುತ್ತಿದ್ದರೆ ಉತ್ತರವಿಲ್ಲ.
ತಮಗೆ 11.66 ಲಕ್ಷ ನಷ್ಟವಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಂಕಿತ ಕರಣ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 ರ ಅಡಿಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ.