
ಬಸವಾದಿತ್ಯ ದೇವರು
ಚಿತ್ರದುರ್ಗ: ಕೋಟೆನಾಡಿನ ಐತಿಹಾಸಿಕ ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ದೇವರು ಅವರನ್ನು ನೇಮಕ ಮಾಡಲಾಗಿದೆ.
ಮುರುಘಾಮಠದ ಶಿರಸಂಗಿ ಮಹಾಲಿಂಗ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರುಘಾಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಉತ್ತರಾಧಿಕಾರಿ ಘೋಷಿಸಿದರು.
ರುದ್ರಾಕ್ಷಿ ಮಾಲೆ ತೊಡಿಸಿ ಹೂವಿನ ಅಕ್ಷತೆ ಹಾಕುವ ಮೂಲಕ ನೂತನ ಉತ್ತರಾಧಿಕಾರಿಗೆ ಆಶೀರ್ವದಿಸಿದರು. ಡಾ.ಶಿವಮೂರ್ತಿ ಮುರುಘಾ ಶರಣರ ಬಳಿಕ ಬಸವಾದಿತ್ಯ ದೇವರು ಮುರುಘಾಮಠದ ಪೀಠ ಅಲಂಕರಿಸಲಿದ್ದಾರೆ. ಸಮಾಜದ ಮುಖಂಡರು, ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ತಾವು ಸೇರಿದಂತೆ 20 ಮಠಾಧೀಶರು ಮಠವನ್ನು ಮುನ್ನಡೆಸುತ್ತಿದ್ದೇವೆ. ಹಠಾತ್ ಘಟನೆಯಿಂದ ಯಾವುದೇ ಅನಿಶ್ಚಿತತೆ ಉಂಟಾಗಬಾರದು, ಹೀಗಾಗಿ ಉತ್ತರಾಧಿಕಾರಿಯನ್ನು ನೇಮಿಸಲು ನಿರ್ಧರಿಸಿದ್ದೇನೆ. ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಹಾಗೂ ಶಿವಮೂರ್ತಯ್ಯ ದಂಪತಿಯ ಪುತ್ರ ಬಸವಾದಿತ್ಯ, ಮಠದ ಗುರುಕುಲದಲ್ಲಿದ್ದುಕೊಂಡು ಪಿಯುಸಿ ಓದುತ್ತಿದ್ದಾರೆ. ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ತಿಳಿದಿದೆ, ಉನ್ನತ ಶಿಕ್ಷಣವನ್ನು ಮುಂದುವರಿಸುತ್ತಾರೆಂದು ಹೇಳಿದರು.
ರಾಜ್ಯದ ವಿವಿಧೆಡೆ ಶರಣರ ಸಮಾವೇಶ ನಡೆಸಲಾಗುತ್ತಿದೆ. ಪರಸ್ಪರ ಮಾತುಕತೆ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಸಂಘಟನೆಗೆ ಸಹಾಯ ಮಾಡಲು ಶರಣರು ಭೇಟಿಯಾಗುತ್ತಾರೆ. ಅನುಭವ ಮಂಟಪ ಎಂದರೆ ಪ್ರಜಾಪ್ರಭುತ್ವ. ಇಲ್ಲಿ ಸ್ವಯಂ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ಜಾಗವಿಲ್ಲ. ಎಲ್ಲ ಸಮುದಾಯದ ಜನರ ಸಲಹಾ ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಘೋಷಿಸಿದರು.