
ಸಂಗ್ರಹ ಚಿತ್ರ
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ಹಳೆಯ ಹಾಗೂ ದುರ್ಬಲ ಕಟ್ಟಡಗಳ ನೆಲಸಮಗೊಳಿಸಲು ಬಿಬಿಎಂಪಿಗೆ ಆರ್ಥಿಕ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಳೆದ 10 ತಿಂಗಳ ಹಿಂದೆ ಹಲವು ಕಟ್ಟಡಗಳು ಕುಸಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಡವಬಹುದಾದ ಹಳೆಯ ಮತ್ತು ದುರ್ಬಲ ಕಟ್ಟಡಗಳ ಪಟ್ಟಿ ಸಿದ್ಧಪಡಿಸುವಂತೆ ಎಂಜಿನಿಯರ್ ಗಳಿಗೆ ಪಾಲಿಕೆ ಸೂಚನೆ ನೀಡಿತ್ತು.
ಇದರಂತೆ ಎಂಜಿನಿಯರ್ ಗಳು ಪಟ್ಟಿಯನ್ನು ಸಿದ್ದಪಡಿಸಿದ್ದು, 13 ಕಟ್ಟಡಗಳ ತೆರವುಗೊಳಿಸುವ ಅಗತ್ಯವಿಗೆ ಎಂದು ತಿಳಿಸಿದ್ದರು. ಆದರೆ, ಈ ಕಟ್ಟಡಗಳ ನೆಲಸಮಗೊಳಿಸಲು ಬಿಬಿಎಂಪಿಗೆ ಹಣದ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ದಾಖಲೆ ಪ್ರಕಾರ ಇಂತಹ 503 ಕಟ್ಟಡಗಳಿವೆ. ಈ ವರೆಗೂ ನಾವು 13 ಕಟ್ಟಡಗಳನ್ನು ನೆಲಸಮ ಮಾಡಿದ್ದೇವೆ. ಹಲವು ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳಿಗೆ (ಎಇಇ) ಈಗ ವಾರ್ಡ್ಗಳಿಗೆ ನಿಗದಿಪಡಿಸಿರುವ ಅನುದಾನವನ್ನೇ ಕಾಹರ್ಯಾಚರಣೆಗೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಮಿಕರ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರಿಗೆ ದಂಡ ವಿಧಿಸಲು ಬಿಬಿಎಂಪಿ ಮುಂದು
ಬಳಿಕ ಕೋವಿಡ್ ಕುರಿತು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ -19 ಹರಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಪ್ರತಿದಿನ 15,000 ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮತ್ತು ಪ್ರಾಥಮಿಕವಾಗಿ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಒಂದು ವಾರದಲ್ಲಿ 120 ರಿಂದ 140 ಸೋಂಕು ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಯಾವುದೇ ರೀತಿಯ ಗಂಭೀರ ಪ್ರಕರಣಗಳು ವರದಿಯಾಗಿಲ್ಲ ಮತ್ತು ಜೀನೋಮ್ ಅನುಕ್ರಮದಲ್ಲಿ ಕೂಡ ಯಾವುದೇ ಮಹತ್ವದ ಬೆಳವಣಿಗೆ ಕಂಡುಬಂದಿಲ್ಲ. ಬಿಬಿಎಂಪಿಯು 18 ವರ್ಷ ಮೇಲ್ಪಟ್ಟವರಿಗೆ ಮೊದಲ ಮತ್ತು ಎರಡನೇ ಡೋಸ್ಗಳಲ್ಲಿ ಸುಮಾರು 100 ಪ್ರತಿಶತದಷ್ಟು ಲಸಿಕೆಯನ್ನು ಸಾಧಿಸಿದೆ ಮತ್ತು ಇದುವರೆಗೆ ಆರು ಲಕ್ಷ ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ಅಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಮುಂಜಾಗ್ರತಾ ಲಸಿಕೆಗಳ ನೀಡಲು ಅನುಮತಿ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಇದನ್ನೂ ಓದಿ: ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ
15 ರಿಂದ 17 ವರ್ಷ ವಯಸ್ಸಿನವರಲ್ಲಿ ಶೇಕಡ 70 ರಷ್ಟು ಜನರು ಲಸಿಕೆಯನ್ನು ಪಡೆದಿದ್ದಾರೆ ಮತ್ತು ಶಾಲೆಗಳು ಸಂಪೂರ್ಣವಾಗಿ ಪುನರಾರಂಭಗೊಂಡ ಬಳಿಕ ಇನ್ನುಳಿದವರಿಗೂ ಲಸಿಕೆ ನೀಡುವ ಕಾರ್ಯ ನಡೆಸಲಾಗುತ್ತದೆ. ಅದೇ ರೀತಿ, 12 ರಿಂದ 14 ವರ್ಷ ವಯಸ್ಸಿನ ಬಹುತೇಕ ಎಲ್ಲರಿಗೂ ಮೊದಲ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ, ಪ್ರಸ್ತುತ ಕೇವಲ ಶೇ.20ರಷ್ಟು ಜನರಿಗೆ ಮಾತ್ರ ಎರಡನೇ ಡೋಸ್ ನೀಡಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ನಿಗದಿತ ಗುರಿ ಮುಟ್ಟಲು ಯೋಜಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ತೆರಳಿ ಲಸಿಕೆ ಹಾಕಲಿದ್ದಾರೆ ಎಂದು ಹೇಳಿದ್ದಾರೆ.