ರೈತ ನಾಯಕರಿಂದ ವಂಚನೆ ಆರೋಪ: ಸ್ಪಷ್ಟೀಕರಣ ಸುದ್ದಿಗೋಷ್ಠಿಯಲ್ಲಿ ಹೈಡ್ರಾಮಾ, ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ!!
ಹೋರಾಟ ನಿಲ್ಲಿಸಲು ಹಣ ಕೇಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಮುಂದಾಗಿದ್ದ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಲಾಗಿದೆ.
Published: 30th May 2022 01:57 PM | Last Updated: 30th May 2022 02:25 PM | A+A A-

ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ದಾಳಿ
ಬೆಂಗಳೂರು: ಹೋರಾಟ ನಿಲ್ಲಿಸಲು ಹಣ ಕೇಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಮುಂದಾಗಿದ್ದ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಲಾಗಿದೆ.
Farmer leader and national spokesperson of Bharatiya Kisan Union Rakesh Tikait's
— Shrirambn (@shrirambn) May 30, 2022
face was smeared with black ink by a youth at Gandhi Bhavan where Tikait was there to attend meeting organised by Karnataka Rajya Raitha Sangha on Monday in Bengaluru. @NewIndianXpress pic.twitter.com/OWITGqciPH
ರೈತರ ಹೋರಾಟ ನಿಲ್ಲಿಸಲು 3 ಸಾವಿರ ಕೋಟಿ ಕೇಳಿದ ಡೀಲ್ ಪ್ರಸ್ತಾಪಿಸಿ ಈ ಹಿಂದೆ ಸುದ್ದಿವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೇ ಕಾರಣಕ್ಕಾಗಿ ಸ್ಪಷ್ಟೀಕರಣ ನೀಡಲು ಬೆಂಗಳೂರಿನತ್ತ ರಾಷ್ಟ್ರೀಯ ರೈತ ನಾಯಕರು ದೌಡಾಯಿಸಿದ್ದು, ಇಂದು ಗಾಂಧಿ ಭವನದಲ್ಲಿ ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ಸುದ್ದಿಗೋಷ್ಠಿ ಕರೆದಿದ್ದರು.
ಈ ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ರಾಕೇಶ್ ಟಿಕಾಯತ್ ಮತ್ತು ಯುಧ್ವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಲಾಗಿದೆ. ಅಲ್ಲದೆ ಅಲ್ಲಿದ್ದ ಕೆಲ ಮಂದಿ ರಾಕೇಶ್ ಟಿಕಾಯತ್ ಅವರ ಬೆಂಬಲಿಗರ ಮೇಲೆ ದಾಳಿ ಮಾಡಿದ್ದಾರೆ. ಸ್ಥಳದಲ್ಲಿದ್ದ ಕುರ್ಚಿಗಳಿಂದ ಪರಸ್ಪರ ಹಲ್ಲೆ ಮಾಡಲಾಗಿದೆ.
ಈ ದಿಢೀರ್ ಬೆಳವಣಿಗೆಯಿಂದ ರೈತ ನಾಯಕ ರಾಕೇಶ್ ಟಿಕಾಯತ್ ಕರೆದಿದ್ದ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಏನಿದು ಘಟನೆ?
ಕರ್ನಾಟಕದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡುತ್ತಿರುವಾಗ ಟಿಕಾಯತ್ ಮತ್ತು ಸಿಂಗ್ ಮುಖಕ್ಕೆ ಮಸಿ ಎರಚಲಾಗಿದೆ. ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕೋಡಿಹಳ್ಳಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಕಾಯತ್ ಮತ್ತು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಯುತ್ತಿದ್ದಂತೆ ಕೆಲವರು ವಾಗ್ವಾದಕ್ಕಿಳಿದು ಮಸಿ ಎರಚಿದ್ದಾರೆ. ನಂತರ ಅಲ್ಲಿದ್ದ ಕುರ್ಚಿಗಳನ್ನು ಎಳೆದು ಬಿಸಾಡಿದ್ದಾರೆ. ರೈತ ನಾಯಕ ಚಂದ್ರಶೇಖರ್ ಅವರ ಬೆಂಬಲಿಗರು ಈ ಕೃತ್ಯವೆಸಗಿದ್ದಾರೆ ಎಂದು ಟಿಕಾಯತ್ ಆರೋಪಿಸಿದ್ದಾರೆ.
ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಚರ್ಚೆ ನಡೆಸಲು ನಗರದ ಗಾಂಧಿ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬ ರಾಕೇಶ್ ಟಿಕಾಯತ್ ಮೇಲೆ ಮೈಕ್ನಿಂದ ಹಲ್ಲೆ ನಡೆಸಿದ್ದು, ಮಸಿ ಬಳಿದಿದ್ದಾನೆ. ನಂತರ ಸಭೆಯಲ್ಲಿ ನೆರೆದಿದ್ದ ಇತರರು ಆತನನ್ನು ಹಿಡಿದು, ಕುರ್ಚಿಗಳಿಂದಲೇ ಥಳಿಸಿದರು. ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಮಹಿಳೆಯರು ಭಯಗೊಂಡು ಕಿರುಚಿದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ರಾಕೇಶ್ ಟಿಕಾಯತ್ ಮುಂಚೂಣಿಯಲ್ಲಿದ್ದರು. ನಂತರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯೇ ಜಯಗಳಿಸಿತು. ಕೋಡಿಹಳ್ಳಿ ಚಂದ್ರಶೇಖರ್ ಮತ್ತು ರಾಕೇಶ್ ಟಿಕಾಯತ್ ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿಕೊಂಡಿದ್ದರು. ಕೋಡಿಹಳ್ಳಿ ಚಂದ್ರಶೇಖರ್ ಮಾಡಿರುವ ಆರೋಪಗಳಿಗೆ ಉತ್ತರ ನೀಡುತ್ತಿದ್ದ ವೇಳೆ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿಯಲಾಯಿತು. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯತ್, ‘ಇಂಥ ಘಟನೆ ನಡೆಯಬಾರದಿತ್ತು. ಪೊಲೀಸರು ಭದ್ರತೆ ಒದಗಿಸಿರಲಿಲ್ಲ. ಸರ್ಕಾರವು ಈ ಘಟನೆಯಲ್ಲಿ ಶಾಮೀಲಾಗಿದೆ’ ಎಂದು ಹೇಳಿದರು. ಪರಸ್ಪರ ಹೊಡೆದಾಟಕ್ಕೆ ಮುಂದಾದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.