
ಸೆರೆ ಹಿಡಿಯಲಾಗಿರುವ ಕಾಡಾನೆ
ಮಡಿಕೇರಿ: ಕೊಡಗು ಅರಣ್ಯ ಇಲಾಖೆ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಗಾಯಗೊಂಡು ನರಳುತ್ತಿದೆ. ಈ ಆನೆಗೆ ಆಪರೇಷನ್ ಮಾಡಬೇಕಿದೆ ಎಂದು ಮೂಲಗಳು ಖಚಿತಪಡಿಸಿವೆ.
ಆಗಾಗ್ಗೆ ಗ್ರಾಮಗಳಿಗೆ ಲಗ್ಗೆ ಹಾಕಿ ಬೆಳೆ ಮೇಲೆ ದಾಳಿ ಮಾಡುವ ಮೂರು ಕಾಡಾನೆಗಳನ್ನು ಹಿಡಿಯಲು ಕೊಡಗು ವಿಭಾಗದ ಅರಣ್ಯ ಇಲಾಖೆ ಅನುಮತಿ ಪಡೆದಿದೆ. ಇದರಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಚೆಯಂಡನೆ ಗ್ರಾಮದಲ್ಲಿ ಹೆಣ್ಣಾನೆಯೊಂದಿಗೆ ಆನೆ ಹಿಡಿಯುವ ಕಾರ್ಯಚರಣೆ ನಡೆಸಿ, ದುಬಾರೆ ಆನೆ ಶಿಬಿರದ ಪಳಗಿದ ಆನೆಯ ನೆರವಿನಿಂದ ಕಾಡಾನೆಯನ್ನು ಸೆರೆ ಹಿಡಿಯಲಾಯಿತು.
ಆದಾಗ್ಯೂ, ಕಾರ್ಯಾಚರಣೆ ವೇಳೆಯಲ್ಲಿ ಗಾಯಗೊಂಡು ಸುಮಾರು 20 ವರ್ಷದ ಕಾಡಾನೆ ನರಳುತ್ತಿದೆ. ಅದರ ಕಾಲೊಂದರ ಮೂಳೆ ಮುರಿದಿದೆ. ಸೆರೆ ಹಿಡಿಯಲಾದ ಕಾಡಾನೆಯ ಕಾಲೊಂದರ ಮೂಳೆ ಮುರಿದಿದೆ. ದುಬಾರೆ ಆನೆ ಶಿಬಿರದಲ್ಲಿಆನೆ ಇಡಲಾಗಿದೆ. ಅದಕ್ಕೆ ಆಪರೇಷನ್ ಮಾಡಬೇಕಾಗಿದೆ ಎಂದು ಡಿಸಿಎಫ್ ಪೂವಯ್ಯ ಹೇಳಿದ್ದಾರೆ.
ಈ ಮಧ್ಯೆ, ಕರಡ ಗ್ರಾಮ ವ್ಯಾಪ್ತಿಯಲ್ಲಿ ಮತ್ತೊಂದು ಕಾಡಾನೆ ಸೆರೆ ಹಿಡಿಯಲು ಯೋಜನೆ ರೂಪಿಸಲಾಗಿದ್ದು, ಗುಡ್ಡಗಾಡು ಪ್ರದೇಶವನ್ನು ಸಮತಟ್ಟು ಮಾಡಿ ಸುಗಮವಾಗಿ ಸೆರೆ ಹಿಡಿಯಲು ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ. ಕಾಡಾನೆ ಸೆರೆ ಹಿಡಿಯುವುದಕ್ಕಾಗಿ ಗ್ರಾಮದ ಸಮೀಪವಿರುವ ಪ್ರವಾಸಿ ತಾಣ - ಚೇಲಾವರ ಜಲಪಾತಕ್ಕೆ ಪ್ರವಾಸಿಗರಿಗೆ ಮೂರು ದಿನಗಳ ಕಾಲ ಮುಚ್ಚಲು ಆದೇಶಿಸಲಾಗಿದೆ.