ಸಂಪ್‌ಗೆ ಹಾಕಿದ್ದ ಮೋಟರ್ ಕದ್ದ ಆರೋಪ: ಕಾರ್ಮಿಕನ ಥಳಿಸಿ ಕೊಂದ ಮಾಲೀಕ!!
ನಿರ್ಮಾಣ ಹಂತದ ಕಟ್ಟಡದಲ್ಲಿನ ಸಂಪ್ ಗೆ ಅಳವಡಿಸಿದ್ದ ಮೋಟರ್ ಕದ್ದ ಎಂದು ಆರೋಪಿ ಕಾರ್ಮಿಕನ ಕೈ-ಕಾಲು ಕಟ್ಟಿಮರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
Published: 30th May 2022 12:45 PM | Last Updated: 30th May 2022 01:28 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿನ ಸಂಪ್ ಗೆ ಅಳವಡಿಸಿದ್ದ ಮೋಟರ್ ಕದ್ದ ಎಂದು ಆರೋಪಿ ಕಾರ್ಮಿಕನ ಕೈ-ಕಾಲು ಕಟ್ಟಿಮರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಯ್ಸಳ ನಗರದ 18ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ಕಟ್ಟಡದ ಮಾಲಿಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಹೊಯ್ಸಳ ನಗರ ನಿವಾಸಿ ಶ್ರೀನಿವಾಸ ರೆಡ್ಡಿ (68) ಮತ್ತು ಸುಬ್ಬಯ್ಯ ನಾಯ್ಡು (69) ಬಂಧಿತರಾಗಿದ್ದಾರೆ. ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಮುನೇಶ್ವರ ನಗರ ನಿವಾಸಿ ಅಶ್ವಥ್(48) ಕೊಲೆಯಾದ ದುರ್ದೈವಿ. ಮೇ 28ರಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಹೊಯ್ಸಳ ನಗರದ 18ನೇ ಕ್ರಾಸ್‌ನಲ್ಲಿ ಅಪರಿಚಿತ ಶವ ಬಿದ್ದಿರುವುದಾಗಿ ಸ್ಥಳೀಯರು ರಾಮಮೂರ್ತಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪರಿಶೀಲಿಸಿದಾಗ ಮೃತ ವ್ಯಕ್ತಿ ಕಾರ್ಮಿಕ ಅಶ್ವಥ್ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಬಳಿ ಅಪಘಾತದಲ್ಲಿ ಬೀದರ್ ಪ್ರಯಾಣಿಕರ ಸಾವು: ಮೃತರ ಸಂಖ್ಯೆ 8ಕ್ಕೇರಿಕೆ
ಮೋಟರ್ ಕದ್ದ ಎಂದು ಮಾರಣಾಂತಿಕ ಹಲ್ಲೆ
ಗಾರೆ ಕೆಲಸ ಮಾಡುವ ಅಶ್ವಥ್, ಆರೋಪಿ ಶ್ರೀನಿವಾಸ ರೆಡ್ಡಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ. ಮೇ 27ರಂದು ಅಶ್ವಥ್ ಕೆಲಸಕ್ಕೆ ಬಂದಿದ್ದ ವೇಳೆ ಕಟ್ಟಡದ ಮಾಲಿಕ ಶ್ರೀನಿವಾಸ ರೆಡ್ಡಿ ಹಾಗೂ ಕೆಲಸಗಾರ ಸುಬ್ಬಯ್ಯ ನಾಯ್ಡು ಸೇರಿಕೊಂಡು ಸಂಪ್‌ನ ಮೋಟರ್ ಕಳವು ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ತಾನು ಕದ್ದಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ಇಬ್ಬರು ಹಗ್ಗ ಹಾಗೂ ತಂತಿಯಿಂದ ಅಶ್ವಥ್ ನ ಕೈ ಕಾಲು ಕಟ್ಟಿಕಬ್ಬಿಣದ ರಾಡ್ ಹಾಗೂ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಶ್ವಥ್ ಮೃತಪಟ್ಟಿದ್ದಾನೆ. ಬಳಿಕ ನಿರ್ಮಾಣ ಹಂತದ ಕಟ್ಟಡದಿಂದ ಸುಮಾರು 50 ಮೀಟರ್ ದೂರಕ್ಕೆ ಮೃತದೇಹವನ್ನು ಎಳೆದು ತಂದು ಪಾದಚಾರಿ ಮಾರ್ಗದಲ್ಲಿ ಎಸೆದು ಇಬ್ಬರೂ ಪರಾರಿಯಾಗಿದ್ದರು.
ಇದನ್ನೂ ಓದಿ: ಬಾಗಲಕೋಟೆ: ಟೋಪಿ ಧರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಗೆ ಥಳಿತ, ಏಳು ಜನರ ವಿರುದ್ಧ ಎಫ್ ಐಆರ್ ದಾಖಲು
ಈ ನಡುವೆ ಅಶ್ವಥ್ ಮೂರು ದಿನಗಳಾದರೂ ಮನೆಗೆ ಬಾರದಿದ್ದಾಗ ಆತನ ಪತ್ನಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮೃತ ಅಶ್ವಥ್ ಪತ್ನಿ ಮಂಜುಳಾ ಠಾಣೆಗೆ ಬಂದು ಮೇ 27ರಂದು ಕೆಲಸಕ್ಕೆ ಹೋಗಿದ್ದ ಪತಿ ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ. ಕಟ್ಟಡದ ಮಾಲಿಕ ಶ್ರೀನಿವಾಸ ರೆಡ್ಡಿ ಹಾಗೂ ಕೆಲಸಗಾರ ಸುಬ್ಬಯ್ಯ ನಾಯ್ಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಇಬ್ಬರು ಅಶ್ವಥ್ ನ ಕೈ-ಕಾಲು ಕಟ್ಟಿಮಾರಣಾಂತಿಕ ಹಲ್ಲೆ ನಡೆಸಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.