
ಮಸಿ ದಾಳಿಗೊಳಗಾಗಿರುವ ರಾಕೇಶ್ ಟಿಕಾಯತ್.
ಬೆಂಗಳೂರು: ನನ್ನ ಮೇಲೆ ದಾಳಿ ನಡೆಸಿದವರ ಪೂರ್ವಾಪರವನ್ನು ಪೊಲೀಸರು ತನಿಖೆ ನಡೆಸಬೇಕೆಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಿಕಾಗೋಷ್ಠಿಯಲ್ಲಿ ನನ್ನ ಮೇಲೆ ದಾಳಿ ನಡೆದಿರುವುದು ಇದೇ ಮೊದಲು. ಪತ್ರಿಕಾಗೋಷ್ಠಿಯಲ್ಲಿ ಕೆಲವು ಪ್ರಶ್ನೆಗಳು ಹಾಗೂ ಉತ್ತರಗಳ ನೀಡಲಾಗುತ್ತಿತ್ತು. ಇದ್ದಕ್ಕಿದ್ದಂತೆ ಸ್ಥಳಕ್ಕೆ ಬಂದ ಕೆಲವರು ದಾಳಿ ನಡೆಸಿದರು. ನನ್ನನ್ನು ಹತ್ಯೆ ಮಾಡಲು ನಡೆಸಿರುವ ಪಿತೂರಿ ಇದಾಗಿದೆ. ಈ ಸಂಬಂಧ ಪೊಲೀಸರು ವಿಸ್ತೃತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಒಬ್ಬ ವ್ಯಕ್ತಿ ವೇದಿಕೆಯತ್ತ ನಡೆದು ಮೈಕ್‌ನಿಂದ ಹಲ್ಲೆ ನಡೆಸಿದರೆ, ಮತ್ತೊಬ್ಬ ಮಸಿ ಬಳಿದು ಮೋದಿ, ಮೋದಿ ಎಂದು ಕೂಗಿದ. ಸ್ಥಳದಲ್ಲಿ 2-4 ಮಂದಿ ಇದ್ದರು. ಅವರನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿಸಿದ್ದಾರೆ.
ಈ ನಡುವೆ ಟಿಕಾಯತ್ ಮೇಲೆ ದಾಳಿ ನಡೆಸಿದವರು ಹಿಂದೂಪರ ಸಂಘಟನೆಯವರು ಎಂದು ಡಿಸಿಪಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಟಿಕಾಯತ್, ರೈತರೂ ಕೂಡ ಹಿಂದೂಗಳೇ. ಧರ್ಮದ ಆಧಾರದ ಮೇಲೆ ರೈತರನ್ನು ಒಡೆಯುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತ ನಾಯಕರಿಂದ ವಂಚನೆ ಆರೋಪ: ಸ್ಪಷ್ಟೀಕರಣ ಸುದ್ದಿಗೋಷ್ಠಿಯಲ್ಲಿ ಹೈಡ್ರಾಮಾ, ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ!!
ರೈತ ಮುಖಂಡ ಡಾ.ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಮಂಗಳವಾರ ವಿವಿಧ ರೈತ ಸಂಘಟನೆಗಳು ದಾಳಿ ವಿರುದ್ಧ ಪ್ರತಿಭಟನೆ ನಡೆಸಲಿವೆ ಎಂದಿದ್ದಾರೆ.
ಟಿಕಾಯತ್ ಭೇಟಿ ಮಾಡಿದ ಡಿಕೆಶಿ ಟಿಕಾಯತ್ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಕಾಯತ್ ಒಬ್ಬ ರೈತ ಮತ್ತು ರಾಷ್ಟ್ರೀಯ ನಾಯಕ. ಇದು ರಾಜ್ಯ ಸರ್ಕಾರದ ವೈಫಲ್ಯ. ರಾಜ್ಯ ಮತ್ತು ದೇಶದಲ್ಲಿ ತನ್ನ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ತಂತ್ರಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಿದೆ ಎಂದಿದ್ದಾರೆ.