ವಿಶ್ವ ತಂಬಾಕು ರಹಿತ ದಿನ: ಸಿಗರೇಟ್, ಬೀಡಿ ತುಂಡು ಸಂಗ್ರಹ ಅಭಿಯಾನದ ಮೂಲಕ COTPA ಕಾಯ್ದೆಯ ತಿದ್ದುಪಡಿಗೆ ಆಗ್ರಹ!!

ಸಿಗರೇಟ್, ಬೀಡಿ ತುಂಡು ಸಂಗ್ರಹ ಅಭಿಯಾನದ ಮೂಲಕ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗೆ (COTPA) ತಿದ್ದುಪಡಿ ಕಾಯ್ದೆ ಜಾರಿಗೆ ಆಗ್ರಹಿಸಲಾಗಿದೆ.

Published: 31st May 2022 10:57 PM  |   Last Updated: 31st May 2022 11:06 PM   |  A+A-


Campaigners demands for COTPA Act Amendment

ವಿಚಾರ ಸಂಕಿರಣದಲ್ಲಿ ಗಣ್ಯರು

Online Desk

ಬೆಂಗಳೂರು: ಸಿಗರೇಟ್, ಬೀಡಿ ತುಂಡು ಸಂಗ್ರಹ ಅಭಿಯಾನದ ಮೂಲಕ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗೆ (COTPA) ತಿದ್ದುಪಡಿ ಕಾಯ್ದೆ ಜಾರಿಗೆ ಆಗ್ರಹಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಧೂಮಪಾನವನ್ನು ಬಯಲಿಗೆಳೆಯುವ ದಿಸೆಯಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು, ಸಾರ್ವಜನಿಕರು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸದಸ್ಯರು ಬೆಂಗಳೂರು ನಗರದಾದ್ಯಂತ ಸಾವಿರಾರು ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ಸಂಗ್ರಹಿಸಿದ್ದಾರೆ. ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ, ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಪ್ರದರ್ಶಿಸುವ ಮೂಲಕ ಕರ್ನಾಟಕದ ಎಲ್ಲ ಸಂಸದರು ಹಾಗು ಕೇಂದ್ರ ಆರೋಗ್ಯ ಸಚಿವಾಲಯವನ್ನು ಪ್ರಧಾನ ತಂಬಾಕು ನಿಯಂತ್ರಣ ಕಾನೂನಾದ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗೆ (COTPA) ತಿದ್ದುಪಡಿ ಮಾಡಿ ಸಾರ್ವಜನಿಕ ಸ್ಥಳಗಳನ್ನು ಶೇ. 100 ರಷ್ಟು ಧೂಮಪಾನ ಹೊಗೆಮುಕ್ತಗೊಳಿಸಬೇಕೆಂದು ಆಗ್ರಹಿಸಲಾಯಿತು.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಉಲ್ಲಂಘಿಸಿ ಧೂಮಪಾನ: ಪುರಾವೆ ಸಂಗ್ರಹ ಅಭಿಯಾನ, COTPA ತಿದ್ದುಪಡಿಗೆ ಆಗ್ರಹ

ತಂಬಾಕು ಮುಕ್ತ ಕರ್ನಾಟಕ ವೇದಿಕೆ ಮತ್ತು ಅದರ ಸಹಯೋಗ ಸಂಸ್ಥೆಗಳ ನೇತೃತ್ವದಲ್ಲಿ ಮೂರು ವಾರಗಳ ಕಾಲ ನಡೆದ ಅಭಿಯಾನದಲ್ಲಿ, ಜಯನಗರ, ಜೆಪಿ ನಗರ, ಕೆಆರ್ ಮಾರುಕಟ್ಟೆ, ತುಮಕೂರು ರಸ್ತೆ, ಎಂಜಿ ರಸ್ತೆ, ಶಿವಾಜಿನಗರ, ಚಾಮರಾಜಪೇಟೆ, ಸಂಪಂಗಿರಾಮನಗರ ಮತ್ತು ರಾಜಾಜಿನಗರ ಮುಂತಾದ ಪ್ರದೇಶಗಳಲ್ಲಿನ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಕಾಫಿ/ಟೀ ಅಂಗಡಿಗಳು ಮತ್ತು ಹೋಟೆಲ್‌ಗಳ ಬಳಿಯಿಂದ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ಸಂಗ್ರಹಿಸಲಾಗಿದೆ.

ಕೋಟ್ಪಾ ಭಾರತದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಇರುವ ಪ್ರಧಾನ ಕಾನೂನಾಗಿದ್ದು, ಅದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು, ೧೮ ವರ್ಷಗಳಿಗಿಂತ ಕೆಳಗಿನ ಅಪ್ರಾಪ್ತ ವಯಸ್ಕರಿಗೆ ಸಿಗರೇಟ್ ಅಥವಾ ಇತರೆ ಉತ್ಪನ್ನಗಳ ಮಾರಾಟ, ಮತ್ತು ಯಾವುದೇ ಶಿಕ್ಷಣ ಸಂಸ್ಥೆಯ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕಿನ ಮಾರಾಟವನ್ನು ನಿಷೇಧಿಸುತ್ತದೆ. ಆದರೆ, ಈ ಎಲ್ಲ ನಿರ್ಬಂಧಗಳನ್ನು, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ. ಈ ಉಲ್ಲಂಘನೆಗಳಿಗೆ ಪ್ರಸ್ತುತ ಕೋಟ್ಪಾ ಅಡಿ ವಿಧಿಸಲಾಗುತ್ತಿರುವ ದಂಡಗಳು ತೀರಾ ಕಡಿಮೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ತಡೆಗಟ್ಟಲು 200 ರೂಪಾಯಿಯ ದಂಡವು ಸಾಕಾಗುವುದಿಲ್ಲ.

ಇದನ್ನೂ ಓದಿ: ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಕೋಟ್ಪಾ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆ: ಬಿಎಂಸಿಆರ್‌ಐ ಸಮೀಕ್ಷೆ

“ಪ್ರಧಾನ ತಂಬಾಕು ನಿಯಂತ್ರಣ ಕಾನೂನಾದ ಕೋಟ್ಪಾ ಸಾಕಷ್ಟು ಕಠಿಣವಾಗಿಲ್ಲ ಮತ್ತು ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಒಳಗೊಂಡಿಲ್ಲ ಎಂಬುದು ನಮ್ಮ ಸ್ಪಷ್ಟ ಅನಿಸಿಕೆ. ಈ ಅಭಿಯಾನದ ಮೂಲಕ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತಂದು, ಅದನ್ನು ಬಲಪಡಿಸಿ ಉಲ್ಲಂಘನೆಗಳಿಗೆ ಕಡಿವಾಣ ಹಾಕಬೇಕು ಎಂದು ಕರ್ನಾಟಕದ ಎಲ್ಲ ಸಂಸದರು ಮತ್ತು ಕೇಂದ್ರ ಆರೋಗ್ಯ ಮಂತ್ರಾಲಯವನ್ನು ಒತ್ತಾಯಿಸಲು ನಾವು ಬಯಸುತ್ತೇವೆ. ಸಾರ್ವಜನಿಕ ಸ್ಥಳಗಳು ಧೂಮಪಾನದ ಹೊಗೆಯಿಂದ ಶೇ. 100 ರಷ್ಟು ಮುಕ್ತವಾಗಿರಬೇಕು ಎಂಬುದೇ ನಮ್ಮ ಆಶಯ,” ಎಂದು ಖ್ಯಾತ ಕ್ಯಾನ್ಸರ್ ತಜ್ಞ ಮತ್ತು ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ಡಾ. ರಮೇಶ್ ಬಿಳಿಮಗ್ಗ ಹೇಳಿದರು.

ಸಾರ್ವಜನಿಕ ಸ್ಥಳಗಳಾದ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಮತ್ತು ವಿಮಾನ ನಿಲ್ದಾಣಗಳಲ್ಲಿನ ನಿರ್ದಿಷ್ಟ ಧೂಮಪಾನ ಪ್ರದೇಶಗಳು ಧೂಮಪಾನ ಮಾಡದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ನಿರ್ದಿಷ್ಟ ಧೂಮಪಾನ ಪ್ರದೇಶಕ್ಕೆ ಅವಕಾಶ ನೀಡಬಾರದು ಎಂದು ಡಾ. ಬಿಳಿಮಗ್ಗ ತಿಳಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿಸಿ ಮೋಹನ್ ಅವರು ಮಾತನಾಡಿ, “ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ನಮ್ಮ ಯುವ ಜನಾಂಗವನ್ನು ತಂಬಾಕಿನಿಂದ ದೂರವಿರಿಸಿ, ಪರೋಕ್ಷ ಧೂಮಪಾನವನ್ನು ಕಡಿಮೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ಅಭಿಯಾನದ ಮೂಲಕ ಸಾವಿರಾರು ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ಸಂಗ್ರಹಿಸಿರುವುದು ಸಾರ್ವಜನಿಕ ಸ್ಥಳಗಳಲ್ಲಿ ಮಾಡಲಾಗುತ್ತಿರುವ ಧೂಮಪಾನದ ಪ್ರಮಾಣಕ್ಕೆ ಕನ್ನಡಿ ಹಿಡಿದಂತಿದೆ. ಸಮಾಜದ ಹಿತದೃಷ್ಠಿಯಿಂದ ನಾವು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಒಬ್ಬ ಸಂಸದನಾಗಿ ನಾನು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ,” ಎಂದರು.

ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕಾರ್ಯಕಾರಿ ಅಧ್ಯಕ್ಷರಾದ ಡಾ. ಬಿಎಸ್ ಅಜಯ್ ಕುಮಾರ್, “ನಾವು ಎಚ್‌ಸಿಜಿ ಆಸ್ಪತ್ರೆಯನ್ನು ಪ್ರಾರಂಭಿಸಿದ್ದೇ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು. ಕ್ಯಾನ್ಸರ್ ತಜ್ಞರಾಗಿ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡುವುದೇ ನಮ್ಮ ಅಂತಿಮ ಗುರಿಯಾಗಿದೆ. ನಮ್ಮ ಜನರ ಆರೋಗ್ಯವನ್ನು ಕಾಪಾಡಲು ಇರುವ ಉತ್ತಮ ಮಾರ್ಗವೆಂದರೆ ಕ್ಯಾನ್ಸರ್ ಅನ್ನು ತಡೆಗಟ್ಟುವುದು, ಅಂದರೆ ರೋಗವನ್ನೇ ಇಲ್ಲವಾಗಿಸುವುದು. ಕೇವಲ ತಂಬಾಕನ್ನು ನಿರ್ಮೂಲನೆ ಮಾಡುವ ಮೂಲಕ ಸುಮಾರು ಶೇ. ೩೦-೩೫ ಕ್ಯಾನ್ಸರ್‌ಗಳನ್ನು ತಡೆಯಬಹುದು. ತಂಬಾಕು ಪಿಡುಗನ್ನು ಹೋಗಲಾಡಿಸಲು ಇಡೀ ಸಮಾಜವೇ ಒಗ್ಗೂಡಬೇಕಾಗಿದೆ. ಈ ನಿಟ್ಟಿನಲ್ಲಿ, ತಂಬಾಕು ಬಳಕೆಯನ್ನು ನಿಲ್ಲಿಸುವಂತೆ ಜನರನ್ನು ಪ್ರೇರೇಪಿಸುವುದು ನಿಸ್ಸಂದೇಹವಾಗಿ ಒಂದು ನಿರ್ಣಾಯಕ ಮಾರ್ಗ. ಆದರೆ ಹೆಚ್ಚು ಪರಿಣಾಮಕಾರಿ ಮಾರ್ಗವೆಂದರೆ ಸಮಸ್ಯೆಯ ಮೂಲಕಾರಣವನ್ನು ನಿವಾರಿಸುವುದು ಮತ್ತು ತಂಬಾಕಿನ ಉತ್ಪಾದನೆಯನ್ನು ನಿಲ್ಲಿಸಿ ಅದರ ಬೆಳೆಗಾರರನ್ನು ಪರ್ಯಾಯ ಬೇಸಾಯ ಮಾಡಲು ಪ್ರೋತ್ಸಾಹಿಸುವುದು. ಎಚ್‌ಸಿಜಿ ಈಗಾಗಲೇ ಹುಣಸೂರಿನಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ,” ಎಂದು ಹೇಳಿದರು.

ಇದನ್ನೂ ಓದಿ: ಕೋಟ್ಪಾ ಕಾಯ್ದೆಗೆ ತಿದ್ದುಪಡಿಗೆ ಒತ್ತಾಯಿಸಿ ಕ್ಯಾನ್ಸರ್ ಜಯಿಸಿದವರಿಂದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ

ಅಭಿಯಾನದ ಭಾಗವಾಗಿ, “ಕೋಟ್ಪಾ ಬಲಪಡಿಸುವ ಮೂಲಕ ಸಿಗರೇಟ್ ಮತ್ತು ಬೀಡಿ ತುಂಡುಗಳ ನಿರ್ಮೂಲನೆ” ಎಂಬ ವಿಚಾರದ ಕುರಿತು ಚರ್ಚೆ (ಪ್ಯಾನಲ್ ಡಿಸ್ಕಶನ್) ನಡೆಸಲಾಯಿತು. ಸಂಗ್ರಹಿಸಲಾದ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ಸುರಕ್ಷಿತ ವಿಲೇವಾರಿಗಾಗಿ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಎನ್‌ಜಿಒ ಒಂದಕ್ಕೆ ಹಸ್ತಾಂತರಿಸಲಾಗುವುದು. ಇದೇ ಸಂದರ್ಭದಲ್ಲಿ, ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಒತ್ತಾಯಿಸಿ ಮಕ್ಕಳು ಮತ್ತು ಯುವಕರು ಸಂಸದರಿಗೆ ಮನವಿ ಪತ್ರ ಸಲ್ಲಿಸಿದರು. 
 


Stay up to date on all the latest ರಾಜ್ಯ news
Poll
BS yediyurappa

ಬಿಜೆಪಿ ಸಂಸದೀಯ ಮಂಡಳಿಗೆ ಬಿ.ಎಸ್. ಯಡಿಯೂರಪ್ಪ ಸೇರ್ಪಡೆಯಿಂದ 2023 ರ ಕರ್ನಾಟಕ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp