ಅಕ್ರಮ ರಿವಾಲ್ವರ್‌ ಪ್ರಕರಣ: ಸೋಮಶೇಖರ ರೆಡ್ಡಿ ದೋಷಿ ಎಂದ ವಿಶೇಷ ನ್ಯಾಯಾಲಯ, ಬಿಡುಗಡೆ

ಪರವಾನಗಿ ನವೀಕರಿಸದೇ ಅಕ್ರಮವಾಗಿ ರಿವಾಲ್ವಾರ್‌ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಳ್ಳಾರಿಯ ಬಿಜೆಪಿ ಶಾಸಕ ಜಿ ಸೋಮಶೇಖರ ರೆಡ್ಡಿ ಅವರನ್ನು ದೋಷಿ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಆದರೂ, ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಿದೆ.
ಸೋಮಶೇಖರ್ ರೆಡ್ಡಿ
ಸೋಮಶೇಖರ್ ರೆಡ್ಡಿ

ಬೆಂಗಳೂರು: ಪರವಾನಗಿ ನವೀಕರಿಸದೇ ಅಕ್ರಮವಾಗಿ ರಿವಾಲ್ವಾರ್‌ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಳ್ಳಾರಿಯ ಬಿಜೆಪಿ ಶಾಸಕ ಜಿ ಸೋಮಶೇಖರ ರೆಡ್ಡಿ ಅವರನ್ನು ದೋಷಿ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಆದರೂ, ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಿದೆ.

ಬಳ್ಳಾರಿ ನಗರದ ಬ್ರೂಸ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್‌) ನ್ಯಾಯಾಧೀಶೆ ಜೆ ಪ್ರೀತ್‌ ಅವರು ಈ ಆದೇಶ ನೀಡಿದ್ದಾರೆ.

“ಸಿಆರ್‌ಪಿಸಿ ಸೆಕ್ಷನ್‌ 248(2) ರ ಅಡಿ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ 25(1)(ಬಿ)(ಎಚ್) ಅಡಿ ಆರೋಪಿಯು ಅಪರಾಧಿಯಾಗಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಬಳ್ಳಾರಿ ಶಾಸಕ ಮತ್ತು ಕರ್ನಾಟಕ ರಾಜ್ಯ ಹಾಲು ಒಕ್ಕೂಟ ಮಹಾಮಂಡಳಿಯ ಅಧ್ಯಕ್ಷರಾಗಿದ್ದರಿಂದ ಕಾರ್ಯಭಾರದ ಒತ್ತಡ ಮತ್ತು ಮನೆಯ ನವೀಕರಣ ಚಟುವಟಿಕೆಯ ಸಂದರ್ಭದಲ್ಲಿ ಪರವಾನಗಿ ಪುಸ್ತಕ ಕಳೆದು ಹೋಗಿದ್ದರಿಂದ ಪರವಾನಗಿ ಎಂದು ಮುಗಿಯುತ್ತದೆ ಎಂಬುದು ತಿಳಿದಿರಲಿಲ್ಲ ಎಂದು ಆರೋಪಿ ಸೋಮಶೇಖರ ರೆಡ್ಡಿ ವಿವರಣೆ ನೀಡಿದ್ದಾರೆ.

ಆರೋಪಿ ನೀಡಿರುವ ಕಾರಣಗಳು ನ್ಯಾಯಾಲಯಕ್ಕೆ ಸೂಕ್ತ ಎನಿಸುತ್ತಿಲ್ಲ. ಎರಡೂ ಕಾರಣಗಳು ಏಕಕಾಲಕ್ಕೆ ಚಾಲ್ತಿಯಲ್ಲಿರಲಾಗದು. ಇಲ್ಲಿ ಕಾರ್ಯಭಾರದ ಒತ್ತಡ ಅಥವಾ ಪರವಾನಗಿ ಪುಸ್ತಕ ಕಳೆದು ಹೋಗಿರುವ ಯಾವುದಾದರೂ ಒಂದು ಕಾರಣವಿರಬೇಕಾಗುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಆರೋಪಿ ಬಳಿ ಇರುವ ರಿವಾಲ್ವರ್‌ ಸಾಮಾನ್ಯವಾದ ಅಸ್ತ್ರವಲ್ಲ. ಮನೆಯ ನವೀಕರಣ ಚಟುವಟಿಕೆಯ ಸಂದರ್ಭದಲ್ಲಿ ಪರವಾನಗಿ ಪುಸ್ತಕ ಕಳೆದು ಹೋಗಿದೆ ಎಂಬುದನ್ನು ನಂಬಲಾಗದು. ಪುಸ್ತಕ ಕಳೆದಿದ್ದರೆ ದೂರು ದಾಖಲಿಸದಂತೆ ಯಾರು ಆರೋಪಿಯನ್ನು ತಡೆದಿರಲಿಲ್ಲ. ಜನಪ್ರತಿನಿಧಿಯಾಗಿ ತಮ್ಮ ಬಳಿ ಇರುವ ರಿವಾಲ್ವರ್‌ ಬಗ್ಗೆ ಉಡಾಫೆಯಿಂದ ಇರಲಾಗದು. ಅಂದಿನ ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್‌ ಬಿಸ್ವಾಸ್‌ ಅವರ ಮುಂದೆ ನೀಡಿರುವ ವಿವರಣೆಯನ್ನು ಒಪ್ಪಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರ ವಕೀಲರು “ಬಳ್ಳಾರಿ ಅಂದಿನ ಜಿಲ್ಲಾಧಿಕಾರಿಯು ಸೋಮಶೇಖರ ರೆಡ್ಡಿ ಬಳಿ ಇದ್ದ .32 ಎನ್‌ ಪಿ ಬೋರ್‌ ರಿವಾಲ್ವರ್‌ಗೆ 2005ರಲ್ಲಿ ಪರವಾನಗಿ ನೀಡಿದ್ದರು. ಆನಂತರ ನಿಯಮಿತವಾಗಿ ಪರವಾನಗಿ ನವೀಕರಿಸಿದ್ದ ರೆಡ್ಡಿ ಅವರು 2009ರ ಡಿಸೆಂಬರ್‌ 31ರ ನಂತರ ಪರವನಾಗಿ ನವೀಕರಿಸಿರಲಿಲ್ಲ. ಅಲ್ಲದೇ, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ 21, ಉಪ ಸೆಕ್ಷನ್‌ 1ರ ಅಡಿ ಅದನ್ನು ಸಂಬಂಧಿತ ಠಾಣೆಗೆ ತಲುಪಿಸಿರಲಿಲ್ಲ. ಚುನಾವಣೆ ಘೋಷಣೆಯಾಗಿದ್ದರಿಂದ 2011ರ ನವೆಂಬರ್‌ 10ರಂದು ರಿವಾಲ್ವಾರ್‌ ಅನ್ನು ಠಾಣೆಗೆ ರೆಡ್ಡಿ ತಲುಪಿಸಿದ್ದರು. ಅಲ್ಲದೇ, ರಿವಾಲ್ವರ್‌ ಪರವಾನಗಿ ನವೀಕರಣಕ್ಕೆ 2011ರ ನವೆಂಬರ್‌ 16ರಂದು ಅರ್ಜಿ ಹಾಕಿದ್ದು, ಸಂಬಂಧಿತ ಪ್ರಾಧಿಕಾರವು 360 ರೂಪಾಯಿ ದಂಡ ಸಂಗ್ರಹಿಸಿ, ಪರವಾನಗಿ ನವೀಕರಿಸಿತ್ತು. ಆರೋಪಿಯಿಂದ ತಡವಾಗಿರುವುದಕ್ಕೆ ಶುಲ್ಕ ಸಂಗ್ರಹಿಸಿರುವುದರಿಂದ ಆರೋಪಿಯ ವಿಚಾರಣೆ ನಡೆಸಲಾಗದು” ಎಂದು ವಾದಿಸಿದ್ದರು.

ಮುಂದುವರಿದು “ರಿವಾಲ್ವಾರ್‌ ಪರವಾನಗಿ ನವೀಕರಿಸುವಂತೆ ಆರೋಪಿಗೆ ಶಸ್ತ್ರಾಸ್ತ್ರ ನಿಯಮಗಳ ನಿಯಮ 54(2)ರ ಅಡಿ ದೂರುದಾರರು ಸೂಚಿಸಬೇಕಿತ್ತು. ಆದರೆ, ಈ ಸಂಬಂಧ ಯಾವುದೇ ನೋಟಿಸ್‌ ನೀಡಲಾಗಿಲ್ಲ. ಸಕ್ಷಮ ಪ್ರಾಧಿಕಾರ ಮತ್ತು ದೂರುದಾರರು ಒಬ್ಬರೇ ಆಗಿರುವುದರಿಂದ, ಅನುಮತಿ ನಿಲ್ಲುವುದಿಲ್ಲ. ಹೀಗಾಗಿ ಆರೋಪಿಯನ್ನು ಖುಲಾಸೆಗೊಳಿಸಬೇಕು" ಎಂದು ವಾದಿಸಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

ಅಪರಾಧಿಗಳ ಪ್ರೊಬೇಶನ್ ಆಕ್ಟ್ (ಪಿಒ ಆಕ್ಟ್) ಕಾಯಿದೆ ಸೆಕ್ಷನ್‌ 4ರ ಅಡಿ ಬಿಡುಗಡೆ ಮಾಡುವಂತೆ ಆರೋಪಿ ಪರ ವಕೀಲರು ಮನವಿ ಮಾಡಿದ್ದರು. ಇದಕ್ಕೆ ಪ್ರಾಸಿಕ್ಯೂಷನ್‌ ವಿರೋಧ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಿಲ್ಲಾ ಪ್ರೊಬೇಷನ್‌ ಅಧಿಕಾರಿಯಿಂದ ವರದಿ ಕೇಳಿತ್ತು.

ಹಾಲಿ ಪ್ರಕರಣ ಹೊರತುಪಡಿಸಿ ಆರೋಪಿಯ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣ ಇಲ್ಲ. ಬಳ್ಳಾರಿ ನಿವಾಸಿಯಾಗಿರುವ ಸೋಮಶೇಖರ ರೆಡ್ಡಿ ಅವರು ಹಾಲಿ ಶಾಸಕರಾಗಿದ್ದಾರೆ. ಅಲ್ಲದೇ, ಅವರು ಕೆಎಂಎಫ್‌ ಅಧ್ಯಕ್ಷರಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸನ್ನಡತೆ ಹೊಂದಿದ್ದಾರೆ. ಆರೋಪಿಯು ಘೋರ ಅಪರಾಧ ಎಸಗಿಲ್ಲ. ಪ್ರಕರಣದ ವಾಸ್ತವಿಕ ಅಂಶಗಳು ಮತ್ತು ಆರೋಪಿಯ ಕುರಿತು ಪ್ರೊಬೇಷನ್‌ ಅಧಿಕಾರಿ ನೀಡಿರುವ ವರದಿಯನ್ನು ಪರಿಗಣಿಸಲಾಗಿದ್ದು, ಆರೋಪಿಯು ತಾವು ಎಸಗಿರುವ ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಹಾಲಿ ಅಪರಾಧಕ್ಕೆ ಒಂದರಿಂದ ಮೂರು ವರ್ಷಗಳ ವರೆಗೆ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದ್ದು, ಜೀವಾವಧಿ ಅಥವಾ ಮರಣ ದಂಡನೆಯಲ್ಲ. ಹೀಗಾಗಿ, ಪಿಒ ಆಕ್ಟ್ ಸೆಕ್ಷನ್‌ 4ರ ಅಡಿ ದೋಷಿಯನ್ನು ಬಿಡುಗಡೆ ಮಾಡುವುದರಿಂದ ಸಮಾಜದ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ರೂ.50 ಸಾವಿರ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಒಂದು ಭದ್ರತೆ ಒದಗಿಸಬೇಕು. ಸ್ಥಳೀಯವಾಗಿ ಆರೋಪಿಯು ಶಾಂತಿ ಕಾಪಾಡಬೇಕು. ಉತ್ತಮ ನಡವಳಿಕೆ ತೋರಬೇಕು. ಆರೋಪಿಯು ಯಾವುದೇ ಕ್ರಿಮಿನಲ್‌ ಚಟುವಟಿಕೆಯಲ್ಲಿ ತೊಡಗಬಾರದು. ನ್ಯಾಯಾಲಯದ ಅನುಮತಿ ಇಲ್ಲದೇ ವಿದೇಶ ಪ್ರಯಾಣ ಮಾಡುವಂತಿಲ್ಲ. ಒಂದು ವರ್ಷದವರಗೆ ಆರೋಪಿಯು ಈ ನ್ಯಾಯಾಲಯದ ಮೇಲ್ವಿಚಾರಣೆಗೆ ಒಳಪಟ್ಟಿರುತ್ತಾರೆ. ಆರೋಪಿಯು ಯಾವುದೇ ಷರತ್ತು ಉಲ್ಲಂಘಿಸಿದರೆ ನ್ಯಾಯಾಲಯ ನೀಡಿರುವ ಅವಕಾಶ ಸ್ವಯಂಚಾಲಿತವಾಗಿ ರದ್ದಾಗಲಿದೆ. ಒಂದು ವರ್ಷದವರೆಗೆ ಮೂರು ತಿಂಗಳಿಗೆ ಒಮ್ಮೆ ಆರೋಪಿಯು ನ್ಯಾಯಾಲಯದ ಮುಂದೆ ಹಾಜರಾಗಿ, ಷರತ್ತುಗಳನ್ನು ಉಲ್ಲಂಘಿಸಲಾಗಿಲ್ಲ ಎಂಬ ಅಫಿಡವಿಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠವು ಆದೇಶ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com