ಈಶಾನ್ಯ ಮಾನ್ಸೂನ್ ಪ್ರಭಾವ: ಬೆಂಗಳೂರು, ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕೈದು ದಿನ ವ್ಯಾಪಕ ಮಳೆ

ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಆರಂಭವಾಗಿದೆ. ನಿನ್ನೆ ಸಾಯಂಕಾಲದಿಂದ ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು ಇಂದಿನಿಂದ ಮಳಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಆರಂಭವಾಗಿದೆ. ನಿನ್ನೆ ಸಾಯಂಕಾಲದಿಂದ ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು ಇಂದಿನಿಂದ ಮಳಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಈಶಾನ್ಯ ಮಾನ್ಸೂನ್ ಪ್ರಾರಂಭವಾದ ನಂತರ ಮಳೆ ಹೆಚ್ಚಾಗಲಿದ್ದು, ಇಂದಿನಿಂದ ನವೆಂಬರ್ 4ರವರೆಗೆ ಕರಾವಳಿ, ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಕೊಡಗು, ಶಿವಮೊಗ್ಗ, ಕೋಲಾರ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ (Yellow Alert) ಘೋಷಿಸಲಾಗಿದೆ.

ಇಂದಿನಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ. ತುಮಕೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಕೋಲಾರ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ. 

ನವೆಂಬರ್ 3ರಂದು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ಈಶಾನ್ಯ ಮಾನ್ಸೂನ್ ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಕ್ಕೆ ಆಗಮಿಸುತ್ತಿದ್ದಂತೆ ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ 3 ದಿನಗಳವರೆಗೆ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಈಶಾನ್ಯ ಮುಂಗಾರು ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆಯಿದ್ದು, ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ನವೆಂಬರ್ 5ರವರೆಗೆ ಭಾರಿ ಮಳೆಯಾಗಲಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ತಿರುವಳ್ಳೂರು, ಕಾಂಚೀಪುರಂ, ರಾಣಿಪೇಟ್, ವೆಲ್ಲೂರು, ತಿರುಪತ್ತೂರು, ಕೃಷ್ಣಗಿರಿ, ಧರ್ಮಪುರಿ ಮತ್ತು ಸೇಲಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಚೆನ್ನೈ, ಚೆಂಗಲ್ಪಟ್ಟು, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಪೆರಂಬಲೂರು, ಅರಿಯಲೂರು, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಮೈಲಾಡುತುರೈ, ಪುದುಕ್ಕೊಟ್ಟೈ, ನಾಮಕ್ಕಲ್ ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳುಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ನವೆಂಬರ್ 5ರವರೆಗೆ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ನವೆಂಬರ್ ತಿಂಗಳಲ್ಲಿ ದಾಖಲೆಯ ಮಳೆ: ನವೆಂಬರ್ ತಿಂಗಳ ಮಾನ್ಸೂನ್ ಸೂಚ್ಯಂಕವನ್ನು ಬಿಡುಗಡೆ ಮಾಡಿದ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ, ತಮಿಳುನಾಡು ಸೇರಿದಂತೆ ದಕ್ಷಿಣ ಪೆನಿನ್ಸುಲಾ ಭಾರತದ ಮೇಲೆ ನವೆಂಬರ್‌ನಲ್ಲಿ ಮಾಸಿಕ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. 

ಅಕ್ಟೋಬರ್ 29 ರಂದು ಪ್ರಾರಂಭವಾದ ಈಶಾನ್ಯ ಮಾರುತ ಕಳೆದೆರಡು ದಿನಗಳಿಂದ ಸಮೃದ್ಧ ಮಳೆಯನ್ನು ತರುತ್ತಿದೆ. ಚೆನ್ನೈ ಮತ್ತು ನೆರೆಯ ಜಿಲ್ಲೆಗಳು ಕಳೆದ 24 ಗಂಟೆಗಳಲ್ಲಿ ತೀವ್ರ ರಭಸವನ್ನು ಪಡೆದಿವೆ, ಇಲ್ಲಿ ಹಲವಾರು ಹವಾಮಾನ ಕೇಂದ್ರಗಳಲ್ಲಿ 10 ಸೆಂ.ಮೀ ಗಿಂತ ಹೆಚ್ಚಿನ ಮಳೆಯನ್ನು ದಾಖಲಿಸಿವೆ.

ತಿರುವಳ್ಳೂರಿನ ರೆಡ್ ಹಿಲ್ಸ್ ನಲ್ಲಿ ನಿನ್ನೆ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು 13 ಸೆಂ.ಮೀ ಮಳೆಯಾಗಿದೆ. ಚೆನ್ನೈನ ಪೆರಂಬೂರ್ ನಲ್ಲಿ 12 ಸೆಂ.ಮೀ. ಚೆನ್ನೈ ಕಲೆಕ್ಟರೇಟ್ ಕಟ್ಟಡ, ತೊಂಡೈಯಾರ್ ಪೇಟ್, ವಿಲ್ಲಿವಕ್ಕಂ ಮತ್ತು ಪೊನ್ನೇರಿಯಲ್ಲಿನ ಹವಾಮಾನ ಕೇಂದ್ರಗಳಲ್ಲಿ 10 ಸೆಂ.ಮೀ ಮಳೆ ದಾಖಲಾಗಿದೆ. ನುಂಗಂಬಾಕ್ಕಂ, ಡಿಜಿಪಿ ಕಚೇರಿ, ನಂದನಂ, ಅಣ್ಣಾ ವಿಶ್ವವಿದ್ಯಾನಿಲಯ ಸೇರಿದಂತೆ ಹಲವಾರು ಇತರ ನಿಲ್ದಾಣಗಳಲ್ಲಿ 6 ಸೆಂ.ಮೀ ನಿಂದ 8 ಸೆಂ.ಮೀ ವರೆಗಿನ ಗಮನಾರ್ಹ ಮಳೆ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com