ದೊಡ್ಡ ಗಣಪತಿ ದೇವಸ್ಥಾನ ಟೆಂಡರ್ ವಿವಾದ: 'ದಲಿತರಿಗೆ ಚಪ್ಪಲಿ ಕಾಯುವ ಕೆಲಸ'; ಇದು ಸಿದ್ದು ಸರ್ಕಾರದ ಆದೇಶ ಎಂದ ಬಿಜೆಪಿ, ಟೆಂಡರ್ ರದ್ದು!

ಚಪ್ಪಲಿ ಕಾಯುವ ಕೆಲಸಕ್ಕೆ ದಲಿತರಿಗೆ ಮೀಸಲಾತಿ ಪ್ರಕಟಿಸಿದ್ದ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಟೆಂಡರ್ ಪ್ರಕಟಣೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ದೊಡ್ಡ ಗಣಪತಿ ದೇವಸ್ಥಾನ
ದೊಡ್ಡ ಗಣಪತಿ ದೇವಸ್ಥಾನ

ಬೆಂಗಳೂರು: ಚಪ್ಪಲಿ ಕಾಯುವ ಕೆಲಸಕ್ಕೆ ದಲಿತರಿಗೆ ಮೀಸಲಾತಿ ಪ್ರಕಟಿಸಿದ್ದ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಟೆಂಡರ್ ಪ್ರಕಟಣೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ತಿರುಗೇಟು ನೀಡಿದೆ.

ಬಸವನಗುಡಿಯಲ್ಲಿರುವ ದೊಡ್ಡಗಣಪತಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್‌ ಟೆಂಡರ್‌ ಅನ್ನು ಪರಿಶಿಷ್ಟರಿಗೆ ಮೀಸಲಿಟ್ಟ ವಿಚಾರಕ್ಕೆ ಸಂಬಧಿಸಿದಂತೆ ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಈ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯಿಸಿ ಕಾಂಗ್ರೆಸ್‌ ಸರ್ಕಾರದಲ್ಲಿರುವಾಗಲೇ ಈ ರೀತಿಯ ಟೆಂಡರ್‌ ಕರೆಯಲಾಗಿತ್ತು ಎಂದು ಹೇಳಿ ಸಿದ್ದರಾಮಯ್ಯ ಸರ್ಕಾರವನ್ನು ದೂರಿದೆ.

ಇದೇ ವಿಚಾರವಾಗಿ ಈ ಹಿಂದೆ ಟ್ವೀಟ್ ಮೂಲಕ ಕಿಡಿಕಾರಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, 'ಮುಜರಾಯಿ ದೇವಾಲಯಗಳಲ್ಲಿ ಮಿಕ್ಕೆಲ್ಲ ಟೆಂಡರ್ ಸಾಮಾನ್ಯ ವರ್ಗಕ್ಕೆ, ಚಪ್ಪಲಿ ಕಾಯುವುದು ಮಾತ್ರ ದಲಿತರಿಗೆ. ಇದು ಸರ್ಕಾರಿ ಅಸ್ಪೃಶ್ಯತೆ ಆಚರಣೆ, ದಲಿತರನ್ನು ಚಪ್ಪಲಿ ಕಾಯಲು ಸೀಮಿತಗೊಳಿಸಿ ಬಿಜೆಪಿ ಸರ್ಕಾರ ಮನುಸ್ಮೃತಿ ಪಾಲಿಸುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ದೂರಿದ್ದರು.

ಬಿಜೆಪಿ ತಿರುಗೇಟು
ಇದೀಗ ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಕರ್ನಾಟಕ, ಈ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಆದೇಶ ಹೊರಡಿಸಲಾಗಿದೆ ಎಂದು ಆದೇಶ ಹೊರಡಿಸುವಾಗ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. ಬಿಜೆಪಿ ಸರ್ಕಾರ ಈ ಆದೇಶವನ್ನು ಹಿಂದಕ್ಕೆ ತೆಗೆದುಕೊಂಡಿದೆ, ಹಾಗಾದರೆ ದಲಿತರನ್ನು ಚಪ್ಪಲಿ ಕಾಯಲು ಸೀಮಿತಗೊಳಿಸಿದ್ದು ಯಾರು ಪ್ರಿಯಾಂಕ್‌ ಖರ್ಗೆ ಅವರೇ ಎಂದು ಪ್ರಶ್ನಿಸಿದೆ.

ಟೆಂಡರ್ ರದ್ದು, ಅಧಿಕಾರಿಗೆ ನೋಟಿಸ್: ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ
ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿ, ಈ ರೀತಿ ಟೆಂಡರ್‌ ಪ್ರಕಟಿಸಬಾರದಿತ್ತು. 2016ರಲ್ಲೇ ಈ ರೀತಿಯ ಆದೇಶ ಪ್ರಕಟವಾಗಿತ್ತು. ಈ ಹಿಂದೆಯೇ ಇಂಥ ಪದ್ದತಿ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೆಂಡರ್ ಕರೆದ ಅಧಿಕಾರಿಗೆ ನೋಟಿಸ್‌ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇಂಥ ತಪ್ಪು ಆಗದ ರೀತಿ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ಏನಿದು ವಿವಾದ?
ದೊಡ್ಡ ಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಕರೆದ ಟೆಂಡರ್‌ನಲ್ಲಿ(Tender) ಇಂಥಾದ್ದೇ ಸಮುದಾಯದವರು ಭಾಗವಹಿಸಬೇಕು ಎಂಬ ಅಂಶವಿದೆ. ಬರುವ ಭಕ್ತರ ಪಾದರಕ್ಷೆ ಕಾಯಲು ಟೆಂಡರ್ ಆಹ್ವಾನಿಸಿದ್ದು, ಪರಿಶಿಷ್ಟ ವರ್ಗದವರು ಮಾತ್ರ ಪಾಲ್ಗೊಳ್ಳಬೇಕು ಎಂದು ಪ್ರಕಟಿಸಿದೆ. ಜೊತೆಗೆ ಪೂಜಾ ಸಾಮಾಗ್ರಿ ಮಾರಾಟ, ಈಡುಗಾಯಿ ಆಯ್ದುಕೊಳ್ಳುವ ಹಕ್ಕಿನ ಟೆಂಡರ್, ಎಳನೀರು ಮಾರಾಟದ ಟೆಂಡರ್ ಅನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ದೇವಸ್ಥಾನದ ಈ ಟೆಂಡರ್ ಪ್ರಕಟಣೆಗೆ ವ್ಯಾಪಕ ಟೀಕೆಗೆ ವ್ಯಕ್ತವಾಗಿದ್ದು, ಇದು ವಿವಾದ ಆಗುತ್ತಿದ್ದಂತೆ ಎಚ್ಚೆತ್ತ ದೊಡ್ಡ ಗಣೇಶ ದೇಗುಲದ ಆಡಳಿತ ಮಂಡಳಿ, ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪ್ರಕಟಣೆ ಹೊರಡಿಸಿದೆ. ಮುಜರಾಯಿ ಇಲಾಖೆ ತಹಶೀಲ್ದಾರರು ಈಗ ಈ ರೀತಿಯಾಗಿ ಹೇಗೆ ಟೆಂಡರ್ ಕರೆದಿದ್ದೀರಿ ವಿವರಣೆ ನೀಡಿ ಎಂದು ದೊಡ್ಡ ಗಣೇಶ ದೇಗುಲದ ಆಡಳಿತ ಮಂಡಳಿಗೆ ನೋಟಿಸ್‌ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com