ಹೋಟೆಲ್ ನಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ನಫೀಸಾ ಫಜಲ್ ರಾಜೀನಾಮೆ ಪಡೆದದ್ದು 'ಮೂರ್ಖತನ': ತಮ್ಮ ತಪ್ಪು ನಿರ್ಧಾರದ ಬಗ್ಗೆ ಎಸ್ಎಂಕೆ ವಿಷಾದ!

ತಮ್ಮ ಸಂಪುಟದ ಮಾಜಿ ಸಚಿವೆ ನಫೀಸಾ ಫಜಲ್ ಅವರನ್ನು ಅವರ ಸಮುದಾಯವು ಸಂಪೂರ್ಣವಾಗಿ ಬೆಂಬಲಿಸಲಿಲ್ಲ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ವಿಷಾದ ವ್ಯಕ್ತಪಡಿಸಿದ್ದಾರೆ.
ನಫೀಸಾ ಫಜಲ್ ಆತ್ಮಕತೆ ಬಿಡುಗಡೆ
ನಫೀಸಾ ಫಜಲ್ ಆತ್ಮಕತೆ ಬಿಡುಗಡೆ

ಬೆಂಗಳೂರು: ತಮ್ಮ ಸಂಪುಟದ ಮಾಜಿ ಸಚಿವೆ ನಫೀಸಾ ಫಜಲ್ ಅವರನ್ನು ಅವರ ಸಮುದಾಯವು ಸಂಪೂರ್ಣವಾಗಿ ಬೆಂಬಲಿಸಲಿಲ್ಲ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ವಿಷಾದ ವ್ಯಕ್ತಪಡಿಸಿದ್ದಾರೆ.

ಲೇಖಕಿ  ಸಂಧ್ಯಾ ಮೆಂಡೋನ್ಸಾ ಅವರು ಬರೆದಿರುವ ನಫೀಸಾ ಫಜಲ್ ಅವರ ಆತ್ಮಕತೆ ‘ಬ್ರೇಕಿಂಗ್‌ ಬ್ಯಾರಿಯರ್ಸ್‌’ ಬಿಡುಗಡೆ ಮಾಡಿ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಯಾಗಿ ಉತ್ತಮ ಕೆಲಸ ಮಾಡಿದ್ದರು. ದಕ್ಷಿಣ ಭಾರತದಲ್ಲಿ ಸಚಿವ ಸ್ಥಾನ ಪಡೆದ ಮೊದಲ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದರು ಎಂದು ಕೃಷ್ಣ ಹೊಗಳಿದ್ದಾರೆ.

ನಫೀಸಾ ಫಜಲ್ ಅವರನ್ನು ಎಂಎಲ್ ಸಿ ಮಾಡಿ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿತ್ತು,1985ರಿಂದ ನಾನು ನಫೀಸ್ ಫಜಲ್ ಅವರನ್ನು ನೋಡಿದ್ದೇನೆ. ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರುವುದು ಸಾಧ್ಯವಿಲ್ಲದ ಕಾಲಘಟ್ಟದಲ್ಲಿ ನಿರಂತರ ಪರಿಶ್ರಮ ಮತ್ತು ದೃಢ ನಿಲುವಿನಿಂದ ಮುನ್ನಡೆದು ರಾಜಕೀಯ ಜೀವನದಲ್ಲಿ ಯಶಸ್ವಿಯಾದವರು. ಸಮುದಾಯ, ಸಂಪ್ರದಾಯದ ಅಡೆತಡೆ ಮೀರಿ, ಬದಲಾವಣೆಗಾಗಿ ಹೋರಾಟ ನಡೆಸಿದ ದಿಟ್ಟ ಮಹಿಳೆ ಅವರು. ಅನ್ಯಾಯದ ವಿರುದ್ಧ ಹೋರಾಟಕ್ಕೆ ಹಿಂಜರಿಯದ ಸ್ವಭಾವ ಅವರದ್ದು. ಆ ಸ್ವಭಾವವೇ ಅವರನ್ನು ರಾಜಕಾರಣಿಯನ್ನಾಗಿ ಮಾಡಿತು’ ಎಂದರು.

ಹೋಟೆಲ್‌ ಒಂದರಲ್ಲಿ ಅವರು ನೃತ್ಯ ಮಾಡಿದ್ದು ವಿವಾದವಾಗಿ ಮಾರ್ಪಟ್ಟಿತ್ತು. ನೃತ್ಯ ಮಾಡುವುದು ತಪ್ಪು ಎಂದು ಹೇಳಲಾಗುವುದಿಲ್ಲ. ಆದರೂ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನದಿಂದ ಅವರನ್ನು ಕೈಬಿಡಬೇಕಾಯಿತು. ಅವರ ರಾಜಿನಾಮೆ ಪಡೆದದ್ದು ಮೂರ್ಖತನ, ನಫೀಸಾ ಅವರ ಮಾತನ್ನು ಕೇಳದೆ ನನ್ನ ಪಿಎ ಕಳುಹಿಸಿ ರಾಜಿನಾಮೆ ಪಡೆದು ನಾನು ತಪ್ಪು ಮಾಡಿದೆ ಎಂದು ಕೃಷ್ಣ ವಿಷಾದ ವ್ಯಕ್ತಪಡಿಸಿದರು. ನಂತರ ನನ್ನ ತಪ್ಪನ್ನು ಅರಿತುಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ನೀಡಲಾಯಿತು. ಅದನ್ನೂ ಅವರ ಯಶಸ್ವಿಯಾಗಿ ನಿರ್ವಹಿಸಿದರು ಎಂದು ಶ್ಲಾಘಿಸಿದರು.

ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಮಾತನಾಡಿ, ‘ನಫೀಸ್ ಫಜಲ್ ಅವರು ಅತ್ಯಂತ ಧೈರ್ಯಶಾಲಿ ಮಹಿಳೆ. ಸಂಪ್ರದಾಯದ ಸಂಕೋಲೆಗಳನ್ನು ದಾಟಿ ರಾಜಕಾರಣಕ್ಕೆ ಬಂದವರು. ಅಂದುಕೊಂಡಿದ್ದನ್ನು ಮಾಡಿಯೇ ತೀರಲು ಹಿಂದೇಟು ಹಾಕಿದವರಲ್ಲ. ಕೊಂಕು ಮಾತುಗಳಿಗೆ ಕುಗ್ಗದೆ ನೇರವಾಗಿ ರಾಜಕಾರಣ ಮಾಡಿದರು. ಅವರ ಕುರಿತ ಪುಸ್ತಕ ಬಿಡುಗಡೆಯಾಗಿರುವುದು ಸಂತಸದ ವಿಷಯ’ ಎಂದು ಅವರು ಹೇಳಿದರು.

ಪುರುಷನ ವಿಷಯದಲ್ಲಿ ವಿಭಿನ್ನವಾಗಿರುತ್ತದೆ. ನನ್ನ ಧರ್ಮ ಮತ್ತು ಲಿಂಗವನ್ನಾಧರಿಸಿ ನನ್ನ ಬಗ್ಗೆ ನಿರ್ಣಯಿಸಿದರು. ಆದಕೆ ಕೆಲವೆ ಕೆಲವರು ನನ್ನ ಸಾಮರ್ಥ್ಯ ಮತ್ತು ನನ್ನ ಕೆಲಸ ನೋಡಿದ್ದು ದುರಾದೃಷ್ಟಕರ, ನನ್ನ ಪಾಶ್ಚಿಮಾತ್ಯ ಶೈಲಿಯ ಶಿಕ್ಷಣ ಮತ್ತು ನನ್ನ ಜೀವನ ಶೈಲಿ ನೋಡಿದರು, ನಾನು ಸಂಪ್ರದಾಯಸ್ಥ ಮುಸ್ಲಿಂ ಗೃಹಿಣಿಯಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಿರಾಕರಿಸಿದರು. ಇದು ನನ್ನ ಕಾಲದಲ್ಲಿನ ಮುಸ್ಲಿಂ ರಾಜಕಾರಣಿಗಳ ಕಳವಳಕ್ಕೆ ಕಾರಣವಾಯಿತು. ನನ್ನ ಗ್ಲಾಮರಸ್ ಪಿಕ್ಚರ್ ವಿಮರ್ಶಕರ ಟೀಕೆಗೆ ಗುರಿಯಾಯಿತು,  ರಾಜಕೀಯ ಆಟದಲ್ಲಿ ನಾನು ದಾಳವಾಗಿದ್ದೆ. ಮುಸ್ಲಿಮ್ ಪುರುಷರ ಪ್ರಾಬಲ್ಯದಿಂದ ನನ್ನ ರಾಜಕೀಯ ಜೀವನ ಅವನತಿ ಹೊಂದಿತು ಎಂದು ನಫೀಸಾ ಫಜಲ್ ಆತ್ಮಕತೆಯ ಅಧ್ಯಾಯ ವೊಂದರಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com