ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಪ್ರವಾಸಿಗರ ಗಮನ ಸೆಳೆದ ರಾಜ್ಯ ಸರ್ಕಾರ!
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದ ಉದ್ಯಮಿಗಳ ಗಮನ ಸೆಳೆಯಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದು, ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ.
Published: 05th November 2022 01:58 PM | Last Updated: 05th November 2022 03:08 PM | A+A A-

ಜಾಗತಿಕ ಹೂಡಿಕೆದಾರರ ಸಮಾವೇಶ.
ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದ ಉದ್ಯಮಿಗಳ ಗಮನ ಸೆಳೆಯಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದು, ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ.
ಜಾಗತಿಕ ಹೂಡಿಕೆದಾರರ ಸಮಾವೇಶ ಆರಂಭವಾಗುವುದಕ್ಕೆ ಮೂರು ದಿನ ಬಾಕಿಯಿರುವಾಗಲೇ ರಾಜ್ಯಕ್ಕೆ ಹಲವು ಉದ್ಯಮಿಗಳು ಆಗಮಿಸಿದ್ದು, ಪ್ರವಾಸಿತಾಣಗಳತ್ತ ಮುಖ ಮಾಡಿದ್ದರು ಎಂದು ತಿಳಿದುಬಂದಿದೆ.
ಸಮಾವೇಶದಲ್ಲಿ ಒಂದು ದಿನ ಅಥವಾ ಕೆಲವು ಗಂಟೆಗಳ ಕಾಲ ಮಾತ್ರ ಪಾಲ್ಗೊಳ್ಳಲು ನಗರಕ್ಕೆ ಭೇಟಿ ನೀಡಿದ ಕೆಲ ಉದ್ಯಮಿಗಳು ವಾರಗಳ ಕಾಲ ರಾಜ್ಯದಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದರು. ಐರ್ಲೆಂಡ್, ಪೋಲ್ಯಾಂಡ್, ಕೊರಿಯಾ ಮತ್ತು ಇತರೆ ರಾಷ್ಟ್ರಗಳಿಂದ ಬಂದ ಹಲವು ಉದ್ಯಮಿಗಳು ಕಬಿನಿ, ಜಂಗಲ್ ಲಾಡ್ಜ್'ಗಳು, ರೆಸಾರ್ಟ್ ಹಾಗೂ ಹಂಪಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆ ನಿರ್ವಹಿಸುತ್ತಿರುವ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಇನ್ನು ಕೆಲವರು ಕರ್ನಾಟಕದ ಕಡಲತೀರ ಪ್ರದೇಶಗಳಿಗೆ ಭೇಟಿ ನೀಡಲು ಆಸಕ್ತಿ ತೋರಿದ್ದಾರೆ. ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಇಲಾಖೆಯು ಪ್ರಚಾರ ಕಾರ್ಯಗಳನ್ನು ಮಾಡುತ್ತಿದೆ. ಉದ್ಯಮಿಗಳಿಗೆ ಪ್ಯಾಕೇಜ್ ಗಳನ್ನೂ ನೀಡಲಾಗುತ್ತಿದೆ. 2 ದಿನ ಮೂರು ರಾತ್ರಿ, ಮೂರು ದಿನ- ನಾಲ್ಕು ರಾತ್ರಿಗಳು, ನಾಲ್ಕು ದಿನ- ಐದು ರಾತ್ರಿಗಳು, 5 ದಿನ- ಆರು ರಾತ್ರಿಗಳ ಪ್ಯಾಕೇಜ್ ನೀಡಲಾಗಿದೆ.
ಇದನ್ನೂ ಓದಿ: ಒಂದು ಟಿಕೆಟ್ ನಲ್ಲಿ ಇಡೀ ಕರ್ನಾಟಕ ಸುತ್ತಿ ಬನ್ನಿ: ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ ಜಾರಿ
ಶ್ರವಣ ಬೆಳಗೊಳ, ಹಂಪಿ, ಬೇಲೂರು-ಹಳೇಬೀಡು, ಐಹೊಳೆ, ಚಿಕ್ಕಮಗಳೂರು, ಮೈಸೂರು, ವಿಜಯಪುರ, ಕಲಬುರಗಿ, ಕೂರ್ಗ್, ಮಂಗಳೂರು, ಗೋಕರ್ಣ, ಯಾಣ, ಮುರುಡೇಶ್ವರ, ಉಡುಪಿ, ಬಂಡೀಪುರ, ನಾಗರಹೊಳೆ, ಬಿಆರ್ಟಿ ಅರಣ್ಯ ಪ್ರದೇಶಕ್ಕೆ ಉದ್ಯಮಿಗಳನ್ನು ಕರೆದುಕೊಂಡು ಹೋಗಲಾಗುತ್ತಿದೆ. ಕೇವಲ ರಾಜ್ಯವಷ್ಟೇ ಅಲ್ಲದೆ, ಗೋವಾ ಹಾಗೂ ಹೈದರಾಬಾದ್ ಪ್ರವಾಸಿತಾಣಗಳಿಗೂ ಕರೆದುಕೊಂಡು ಹೋಗಲಾಗುತ್ತಿದೆ. ಪ್ರತೀ ಉದ್ಯಮಿಯೊಂದಿಗೆ ವ್ಯಕ್ತಿಯೊಬ್ಬರನ್ನು ಕಳುಹಿಸಲಾಗುತ್ತಿದ್ದು, ಇವರು ಸ್ಥಳದ ಪರಿಚಯ ಮಾಡಿಕೊಡುತ್ತಿದ್ದಾರೆ. ಈಗಾಗಲೇ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತುಂಬಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಹಲವು ಉದ್ಯಮಿ ವಾರದ ದಿನಗಳಲ್ಲಿಯೇ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಇಚ್ಛಿಸುತ್ತಿದ್ದಾರೆಂದು ತಿಳಿಸಿದ್ದಾರೆ.