ಅಪ್ರಾಪ್ತ ಬಾಲಕಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸದಂತೆ ಹದಿಹರೆಯದವರಿಗೆ ಶಿಕ್ಷಣ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಕಾರಣವಾಗುವ ಪ್ರೇಮ ಪ್ರಕರಣಗಳ ಪರಿಣಾಮಗಳ ಬಗ್ಗೆ ಹದಿಹರೆಯದ ಹುಡುಗರಿಗೆ ವಿಶೇಷವಾಗಿ 9ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗರಿಗೆ ಶಿಕ್ಷಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
Published: 08th November 2022 12:54 PM | Last Updated: 08th November 2022 02:36 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಕಾರಣವಾಗುವ ಪ್ರೇಮ ಪ್ರಕರಣಗಳ ಪರಿಣಾಮಗಳ ಬಗ್ಗೆ ಹದಿಹರೆಯದ ಹುಡುಗರಿಗೆ ವಿಶೇಷವಾಗಿ 9ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗರಿಗೆ ಶಿಕ್ಷಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಆರೋಪದ ಪ್ರಕರಣವೊಂದರಲ್ಲಿ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ಜಿ.ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಮಹತ್ವದ ಆದೇಶ ನೀಡಿದೆ.
ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಶಿಕ್ಷಣ ನೀಡಲು ಸೂಕ್ತ ಸೌಲಭ್ಯಗಳ ಒದಗಿಸಲು ಸಮಿತಿ ರಚಿಸುವಂತೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪೀಠ ಆದೇಶಿಸಿದೆ.
ಇದನ್ನೂ ಓದಿ: ವೇಶ್ಯಾಗೃಹದಲ್ಲಿರುವ ಅಪ್ರಾಪ್ತೆ ಬಲವಂತದ ಲೈಂಗಿಕ ಸಂಪರ್ಕದ ದೂರು ನೀಡಿದರೆ ಗ್ರಾಹಕನನ್ನು ಬಿಡುವಂತಿಲ್ಲ: ಹೈಕೋರ್ಟ್
ಪೋಕ್ಸೊ ಕಾಯ್ದೆ ಅನುಸಾರ ಲೈಂಗಿಕ ಸಂಪರ್ಕಕ್ಕೆ ಹೊಂದಲು ಸಮ್ಮತಿಯ ವಯಸ್ಸು 18 ವರ್ಷ. ಹಾಗಾಗಿ, ವಾಸ್ತವ ನೆಲೆಗಟ್ಟಿನಲ್ಲಿ ಪೋಕ್ಸೊ ಕಾಯ್ದೆ ಅಡಿಯಲ್ಲಿನ ಸಮ್ಮತಿಯ ವಯಸ್ಸಿನ ಮಾನದಂಡದ ಬಗ್ಗೆ ಕಾನೂನು ಆಯೋಗ ಮರುಚಿಂತನೆ ನಡೆಸಬೇಕಿದೆ.
‘ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದಲೇ ಭಾರತೀಯ ದಂಡ ಸಂಹಿತೆ–1860 (ಐಪಿಸಿ) ಹಾಗೂ ಪೋಕ್ಸೊ ಕಾಯ್ದೆ–2012ರ ನಿಯಮಗಳ ಬಗ್ಗೆ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಶಿಕ್ಷಣ ಸಾಮಗ್ರಿ ರೂಪಿಸಲು ರಾಜ್ಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಮಿತಿಯೊಂದನ್ನು ರಚಿಸಬೇಕು. ಐಪಿಸಿ ಮತ್ತು ಪೋಕ್ಸೊ ಕಾಯ್ದೆ ನಿಯಮ ಉಲ್ಲಂಘನೆ ಮಾಡುವುದರಿಂದ ಎಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಈ ಕುರಿತಂತೆ ಮುನ್ನೆಚ್ಚರಿಕೆ ನೀಡುವಂತೆ ಎಲ್ಲಾ ಶಾಲೆಗಳಿಗೆ ಸೂಚಿಸಬೇಕು. ಸಮಿತಿಯು ಈ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.