ಬೆಂಗಳೂರು: ಹೊಂಡ-ಗುಂಡಿ ತುಂಬಿದ ರಸ್ತೆಯಲ್ಲಿ ರಾಗಿ ಪೈರು ನಾಟಿ ಮಾಡಿ ದೇವನಹಳ್ಳಿ ಶಾಸಕ ನಾರಾಯಣ ಸ್ವಾಮಿ ಪ್ರತಿಭಟನೆ

ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ವಿಭಿನ್ನ ಹೋರಾಟ ನಡೆಸಿದರು. ಪಟ್ಟಣದ ಗುಂಡಿಗಳಲ್ಲಿ ಪೈರು ನಾಟಿ ಮಾಡಿದ ಶಾಸಕರು ಸರ್ಕಾರ ರಸ್ತೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ದೇವನಹಳ್ಳಿ ವಿಶ್ವದ ಭೂಪಟಗಳಲ್ಲಿ ಸೇರಿದ ನಗರವಾಗಿದೆ. ಇಂತಹ ನಗರದ ರಸ್ತೆಗಳೆಲ್ಲಾ ಯಮಸ್ವರೂಪಿ ಗುಂಡಿಗಳಾಗಿ ಮಾರ್ಪಟ್ಟಿವೆ. ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು ಹೈರಾಣಾಗಿದ್ದಾರೆ.

ತಾಲ್ಲೂಕಿನಾದ್ಯಂತ ತೀವ್ರವಾಗಿ ರಸ್ತೆಗಳು ಹಾಳಾಗಿರುವುದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದಡಿ ದೇವನಹಳ್ಳಿ ಹಾಗೂ ವಿಜಯಪುರ ಅವಳಿ ಪಟ್ಟಣದಲ್ಲಿನ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಜೆಡಿಎಸ್‌ ತಾಲ್ಲೂಕು ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನಾ ಜಾಥಾ ನಡೆಯಿತು.

ಪಟ್ಟಣದ ಪ್ರಮುಖ ರಸ್ತೆಗಳೆಲ್ಲಾ ಹಲವು ವರ್ಷಗಳಿಂದ ಡಾಂಬರು ಹಾಕದಿರುವ ಪರಿಣಾಮ ಎರಡು ಮೂರು ಅಡಿಗಳಷ್ಟು ಗುಂಡಿಗಳು ಬಿದ್ದಿವೆ. ಇನ್ನೂ ಇದೇ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಪ್ರಯಾಣಿಕರು ಎಷ್ಟೋ ಭಾರಿ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ವರ್ಷದ ಹಿಂದೆಯೇ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಜೊತೆಗೆ ಅಧಿವೇಶನದಲ್ಲೂ ಪಟ್ಟಣದ ಹದಗೆಟ್ಟ ರಸ್ತೆಗಳಿಗೆ ಡಾಂಬರು ಹಾಕಿಸುವಂತೆ ಒತ್ತಾಯ ಮಾಡಿದ್ದ ಶಾಸಕರಿಗೆ ಸರ್ಕಾರ ಕಿಮ್ಮತ್ತು ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ವಿಭಿನ್ನ ಹೋರಾಟ ನಡೆಸಿದರು. ಪಟ್ಟಣದ ಗುಂಡಿಗಳಲ್ಲಿ ಪೈರು ನಾಟಿ ಮಾಡಿದ ಶಾಸಕರು ಸರ್ಕಾರ ರಸ್ತೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ದೇವನಹಳ್ಳಿ ಪೊಲೀಸ್‌ ಠಾಣೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ದುರಾಡಳಿತ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ‘ಸದನದಲ್ಲಿ ಎರಡೆರಡು ಬಾರಿ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದರಿಂದ ಅನುದಾನ ಬಿಡುಗಡೆ ಮಾಡಿದ್ದರೂ ಕಾಮಗಾರಿ ಪ್ರಾರಂಭ ಮಾಡಿಲ್ಲ. ಟೆಂಡರ್‌ನಲ್ಲಿ ಬ್ಲಾಕ್‌ ಲಿಸ್ಟ್‌ನಲ್ಲಿರುವ ಗುತ್ತಿಗೆದಾರರ ಪರ ಪ್ರಭಾವಿಗಳು ಲಾಬಿ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು  ಕೆಲವು ಖಾಸಗಿ ಕಂಪನಿಗಳಿಗೆ ಕಾಂಕ್ರೀಟ್ ನೀಡುವಂತೆ ಕೇಳಿದ್ದೇವೆ, ನಾವು ಕೆಲವು ಗುಂಡಿಗಳನ್ನು ತುಂಬುವಲ್ಲಿ ಯಶಸ್ವಿಯಾಗಿದ್ದೇವೆ, ತಕ್ಷಣ ಅವುಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ಜಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com